ಬೆಂಗಳೂರು: ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬಿದಿಗಿಳಿದು ಪ್ರತಿಭಟನೆ ಮಾಡಿದ್ದೇವೆ. ಇನ್ನೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ ಮೂರು ದಿನಗಳ ಅಧಿವೇಶನದ ಕಲಾಪದಲ್ಲೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಮೌರ್ಯ ವೃತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡು ತಿಂಗಳಿಂದ ನೆರೆ ಹಾವಳಿ ಇದೆ. ಸಂತ್ರಸ್ತರಿಗೆ ಯಾವುದೇ ರೀತಿಯ ನೆರವು ಸಿಕ್ಕಿಲ್ಲ. ಸರಿಯಾದ ಪರಿಹಾರವೂ ದೊರೆತಿಲ್ಲ. ಇದರ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡಲಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿ ಕೊಡುವುದಾಗಿ ಹೇಳಿದ್ದಾರೆ. 5 ಲಕ್ಷ ರೂ. ಮನೆ ಕಟ್ಟಲು ನೀಡುವುದಾಗಿ ಹೇಳಿದ್ದಾರೆ. ಆದರೆ ಈವರೆಗೂ ಒಂದು ಬಿಡುಗಾಸೂ ನೀಡಿಲ್ಲ. ನಾವು ನೆರೆ ಸಂತ್ರಸ್ತರ ಪರವಾಗಿ ನಿಲ್ಲೋ ಕೆಲಸ ಮಾಡುತ್ತಿದ್ದೇವೆ ಎಂದರು.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲ ಆಗಿವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿರುವ ಹಿನ್ನೆಲೆ ಇಂದು ನಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಿದ್ದೇವೆ. ಈಗಲಾದರೂ ಎಚ್ಚೆತ್ತುಕೊಳ್ಳಿ. ಇಲ್ಲದಿದ್ದರೆ ಮೂರು ತಿಂಗಳಲ್ಲಿ ನಡೆದ ಸರ್ಕಾರದ ವೈಫಲ್ಯವನ್ನು ಸದನದಲ್ಲಿ ಎಳೆ ಎಳೆಯಾಗಿ ತೆರೆದಿಡುವ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಐಟಿ ದಾಳಿ ನಡೆಯುತ್ತಿದೆ. ಐಟಿ ದಾಳಿಯನ್ನು ತೆರಿಗೆ ಕಟ್ಟದವರ ಮೇಲೆ ಮಾಡಬೇಕು. ಆದರೆ ದಕ್ಷ ರಾಜಕಾರಣಿಗಳ ಮನೆ ಮೇಲೆ ಮಾಡಲಾಗುತ್ತಿದೆ. ವಿರೋಧ ಪಕ್ಷದವರನ್ನ ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಇನ್ನು ಕಲಾಪದಲ್ಲಿ ಮಾಧ್ಯಮಗಳಿಗೆ ಕಡಿವಾಣ ಹಾಕುವ ಅವಶ್ಯಕತೆ ಇರಲಿಲ್ಲ. ಕೂಡಲೇ ತಮ್ಮ ಸುತ್ತೋಲೆಯನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪನ್ನು ಮುಂದುವರೆಸುವುದಕ್ಕೆ ಯಾವುದೇ ಸಮಸ್ಯೆ ಆಗಬಾರದೆಂದು ಮಾಧ್ಯಮಗಳಿಗೆ ಕಡಿವಾಣ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.