ಬೆಂಗಳೂರು: ನಿಮಗೆ ಮತ ಹಾಕಲು, ಸರ್ಕಾರ ರಚನೆ ಮಾಡಲು ಪಂಚಮಸಾಲಿಗಳು ಬೇಕು, ಮೀಸಲಾತಿಗೆ ಬೇಡವಾ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಮೀಸಲಾತಿ ಕೊಡುವುದಿಲ್ಲ ಅಂದರೆ ಅದನ್ನು ಹೇಗೆ ಪಡೆಯಬೇಕು ಎಂಬುದು ನಮಗೆ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಬೇಡಿಕೆ ಹಿಂದೆ 25 ವರ್ಷಗಳ ಶ್ರಮ ಇದೆ. ಭೂಮಿಯನ್ನ ನಂಬಿಕೊಂಡು ಬದುಕುತ್ತಿರುವುದು ಪಂಚಮಸಾಲಿ ಸಮುದಾಯ. ಪಂಚಮಸಾಲಿಯವರನ್ನು 2ಎ ಗೆ ಸೇರಿಸಬೇಕು ಅಂತ ನಾವು ಮನವಿ ಮಾಡಿದ್ದೇವೆ. ನಿಮಗೆ ಮತ ಹಾಕಲು, ಸರ್ಕಾರ ರಚನೆ ಮಾಡಲು ಪಂಚಮಸಾಲಿಗಳು ಬೇಕು, ಮೀಸಲಾತಿಗೆ ಬೇಡವಾ ಎಂದು ಪ್ರಶ್ನಿಸಿದರು.
ಕೆಲವರು ಪಾದಯಾತ್ರೆ ದಾವಣಗೆರೆಗೆ ಬರುತ್ತಿದ್ದಂತೆ ಠುಸ್ ಆಗುತ್ತದೆ ಅಂದುಕೊಂಡಿದ್ದರು. ಆದರೆ ಇಂದು ವಚನಾನಂದ ಶ್ರೀಗಳು ಈ ಪಾದಯಾತ್ರೆಯಲ್ಲಿ ಇದ್ದಾರೆ. ಯಡಿಯೂರಪ್ಪ ನುಡಿದಂತೆ ನಡೆಯುವ ಮುಖ್ಯಮಂತ್ರಿ. ಅವರು ಮೀಸಲಾತಿ ಕೊಟ್ಟೆ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಕೊಡಲಿಲ್ಲ ಅಂದ್ರೂ ಅದನ್ನ ಹೇಗೆ ಪಡೆಯಬೇಕು ಎನ್ನುವುದು ನಮಗೆ ಗೊತ್ತು. ನಾವು ಸಾಫ್ಟವೇರ್ ಹೌದು, ಹಾರ್ಡವೇರ್ ಹೌದು ಎಂದರು.
ನಮ್ಮ ಸಮುದಾಯದ ಶಾಸಕರೊಂದಿಗೆ ಸಚಿವ ಸಿ.ಸಿ. ಪಾಟೀಲ ಸಿಎಂ ಜೊತೆ ಉಪಹಾರ ಸಭೆ ನಡೆಸಿದ್ದರು. ಪಂಚಮಸಾಲಿ ಸಮುದಾಯದ ಬೇಡಿಕೆ, ಪಾದಯಾತ್ರೆ ಕುರಿತು ಚರ್ಚೆ ನಡೆಸಿದ್ದರು. ಆಗ ಸಿಎಂ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಒಳಗೊಂಡಂತೆ ಒಂದು ನಿಯೋಗ ತೆಗೆದುಕೊಂಡು ದೆಹಲಿಗೆ ಹೋಗಿ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಅವರನ್ನು ಭೇಟಿ ಮಾಡಿ ಎಂದಿದ್ದರು. ಇದನ್ನೇ ಸಚಿವರು ನಮ್ಮ ಗಮನಕ್ಕೂ ತಂದಿದ್ದರು.
ಆದ್ರೆ 2ಎ ಮೀಸಲಾತಿ ರಾಜ್ಯದ ಸಿಎಂ ಪರಮಾಧಿಕಾರ. ಎಸ್ಸಿ ಎಸ್ಟಿ ಅಂದರೆ ಕೇಂದ್ರದ್ದು ಎಂದು ತಿಳಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸೂಚಿಸಿದ್ದೆವು. ಅದರಂತೆ ಸಿ.ಸಿ. ಪಾಟೀಲ ಹಾಗೂ ಶಾಸಕರು ಸಿಎಂ ಗಮನಕ್ಕೆ ತಂದರು. ಆದರೂ ಸಿಎಂ ಕೇಂದ್ರದ ಕಡೆ ಬೆರಳು ಮಾಡಿದ್ದಾರೆ. ಇದರಿಂದ ಅಸಮಧಾನಗೊಂಡು ನಮ್ಮ 11 ಶಾಸಕರು ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ನಾವು ನಿಮ್ಮನ್ನು ರಾಜೀನಾಮೆ ಕೊಡಲು ಕಳಿಸಿದ್ದಿಲ್ಲ, 2ಎ ಗೆ ಸೇರಿಸಲು ಕಳಿಸಿದ್ದು ಎಂದು ರಾಜೀನಾಮೆ ಕೊಡದಂತೆ ತಡೆದೆವು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವುದು ಈ ಸರ್ಕಾರಕ್ಕೆ ಕಬ್ಬಿಣದ ಕಡಲೆಯಲ್ಲ, ಇಚ್ಚಾಶಕ್ತಿ ತೋರಬೇಕು ಅಷ್ಟೇ. ನಮ್ಮ ಸಚಿವರಾದ ಮುರುಗೇಶ್ ನಿರಾಣಿ ಅವರು ಸಿಹಿ ಸುದ್ದಿ ಕೊಡಲಿದ್ದಾರೆ ಎಂದು ಅವರಿಗೆ ಬೆಳಗಾವಿಯ ಕುಂದಾ ತಂದಿದ್ದೇನೆ. ನಮ್ಮ ನಿರೀಕ್ಷೆಯಂತೆ ಅವರು ಸಿಹಿ ಸುದ್ದಿ ನೀಡಿ ಕುಂದಾ ಸ್ವೀಕರಿಸಲಿದ್ದಾರೆ ಎನ್ನುವ ನಿರೀಕ್ಷೆ ಇದೆ ಎಂದರು.
ರಾಜಕೀಯ ಬಿಡುತ್ತೇನೆ, ಸಮಾಜ ಬಿಡಲ್ಲ