ಬೆಂಗಳೂರು :ಅನ್ಯಕೋಮಿನ ಯುವತಿಗೆ ಬೈಕ್‌ನಲ್ಲಿ ಡ್ರಾಪ್ ಮಾಡಿದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದುಗುಂಟೆಪಾಳ್ಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳನ್ನ ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಪ್ರಚಾರಕ್ಕಾಗಿ ಈ ಕೃತ್ಯದಲ್ಲಿ ತೊಡಗಿಕೊಂಡೆವು ಎಂಬ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಕಳೆದ ಶುಕ್ರವಾರ ನಗರದ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿ (ಸಹದ್ಯೋಗಿ)ಯನ್ನು ಹಿಂದೂ ಯುವಕ ಬೈಕ್‌ನಲ್ಲಿ ಕೂರಿಸಿಕೊಂಡಿರುವುದನ್ನು ಕಂಡು ಆರೋಪಿಗಳು ಆತನನ್ನು ಹಿಂಬಾಲಿಸಿ ಅಡ್ಡಗಟ್ಟಿ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದರು. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ :ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದ ನಯಾಜ್ ಹಾಗೂ ಸ್ನೇಹಿತ ಸೋಯೆಲ್ ಇಬ್ಬರು ವಿಚಾರಣೆ ವೇಳೆ ಕೃತ್ಯದ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಪ್ರಚಾರದ ಹುಚ್ಚಿನಿಂದ ನಾವು ಹೀಗೆ ಮಾಡಿದ್ದೆವು. ಧರ್ಮದ ಬಗ್ಗೆ ವಿಡಿಯೋ ಮಾಡಿದರೆ ಒಳ್ಳೆಯ ಪ್ರಚಾರ ಸಿಗಲಿದೆ ಎಂದುಕೊಂಡಿದ್ದೆವು. ಆದರೆ, ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂಬುದಾಗಿ ಗೊತ್ತಿರಲಿಲ್ಲ.