ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ತವರಿಗೆ ತಲುಪಿಸುವ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತೇವೆ. ಆದರೆ ನಮಗೂ ತಂದೆ-ತಾಯಿ, ಕುಟುಂಬ ಸದಸ್ಯರಿದ್ದಾರೆ, ನಮ್ಮನ್ನು ತಲುಪಿಸುವವರು ಯಾರು? ಇಂಥದೊಂದು ಪ್ರಶ್ನೆ ಬಹುತೇಕ ಚಾಲಕ-ನಿರ್ವಾಹಕರದ್ದಾಗಿದೆ.
ಉತ್ತರ ಕರ್ನಾಟಕ ಭಾಗಗಳಿಂದಲೂ ಹೆಚ್ಚಾಗಿ ನಿಯೋಜಿತಗೊಂಡಿರುವ ಕೆಎಸ್‌ಆರ್ ಟಿಸಿ ಬಸ್ ಚಾಲಕ, ನಿರ್ವಾಹಕರು ಇಂದು ಒಂದಿಷ್ಟು ಪ್ರಯಾಣಿಕರನ್ನು ಅವರ ತವರಿಗೆ ತಲುಪಿಸಿ ವಾಪಸಾದರೆ ಮುಂದಿನ 14 ದಿನ ಯಾವುದೇ ಕೆಲಸ ಇರುವುದಿಲ್ಲ. ಈ ಸಂದರ್ಭ ಬೆಂಗಳೂರಿನ ಕ್ವಾರ್ಟರ್ಸ್ ನಲ್ಲಿಯೇ ಸುಮ್ಮನೆ ಕೂರುವ ಬದಲು ವಯಸ್ಸಾದ ತಂದೆ-ತಾಯಿ ಹಾಗೂ ಈಗಾಗಲೇ ಊರು ಸೇರಿರುವ ಹೆಂಡತಿ-ಮಕ್ಕಳ ಜೊತೆ ಒಂದಿಷ್ಟು ದಿನ ನೆಮ್ಮದಿಯಾಗಿ ಕಾಲ ಕಳೆಯುವ ಅವಕಾಶ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ಇದ್ದಾರೆ.
ಆದರೆ ಕಠಿಣ ಕರ್ಫ್ಯೂ ಇವರ ಆಸೆಗೆ ತಣ್ಣೀರೆರಚಿದೆ. ಕಳೆದ ವರ್ಷ ಲಾಕ್ ಡೌನ್ ಘೋಷಣೆಯಾದ ಸಂದರ್ಭ ಒಂದೆರಡು ದಿನಗಳ ನಂತರ ಊರಿಗೆ ತೆರಳಲು ಸಾಕಷ್ಟು ಹರಸಾಹಸ ಪಟ್ಟು ಕೆಲವರು ಊರು ಸೇರಿಕೊಂಡಿದ್ದರು. ಆದರೆ ಈ ಬಾರಿ ಅಂತಹ ಅವಕಾಶಗಳು ಇಲ್ಲವಾಗಿವೆ. ಇಂದು ರಾತ್ರಿಯಿಂದಲೇ ಕಠಿಣ ಕರ್ಫ್ಯೂ ಜಾರಿ ಆಗುತ್ತಿದ್ದು, ನಾಳೆಯಿಂದ ಯಾವುದೇ ಬಸ್ ಅಥವಾ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಕೆಲ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೆಎಸ್ಆರ್ ಟಿಸಿಯ ಬಸ್ ಚಾಲಕ, ನಿರ್ವಾಹಕರಿಗೆ ಊರಿಗೆ ತೆರಳಲು ಅನಾಯಾಸವಾಗಿ ಸಿಕ್ಕ ಅವಕಾಶ ಕಠಿಣ ಕರ್ಫ್ಯೂ ಜಾರಿಯಾದ ಸಂದರ್ಭ ಮಾತ್ರ.