ಕರ್ನಾಟಕ

karnataka

ETV Bharat / city

ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

 we are ready for facing covid third wave : Government inform to High Court
we are ready for facing covid third wave : Government inform to High Court

By

Published : Jun 3, 2021, 10:14 PM IST

ಬೆಂಗಳೂರು: ಕೋವಿಡ್ ಮೂರನೇ ಸಂಭಾವ್ಯ ಅಲೆ ಎದುರಿಸಲು ಸಿದ್ದತೆ ಮಾಡಿಕೊಳ್ಳುತ್ತಿರುವುದಾಗಿ ರಾಜ್ಯ ಸರ್ಕಾರ ಹೈಕೋರ್ಟ್​​​ಗೆ ಮಾಹಿತಿ ನೀಡಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ಪೀಠ, ನ್ಯಾಯಾಲಯ ಈ ಹಿಂದೆ ನೀಡಿರುವ ನಿರ್ದೇಶನದಂತೆ ಮೂರನೇ ಸಂಭಾವ್ಯ ಅಲೆ ತಡೆಗೆ ಸಿದ್ದಗೊಳ್ಳುತ್ತಿದೆಯೇ ಎಂದಿತು. ಇದಕ್ಕೆ ಉತ್ತರಿಸಿದ ಎಎಜಿ ಧ್ಯಾನ್ ಚಿನ್ನಪ್ಪ, ಸರ್ಕಾರ ಮೇ 25ರಂದು ಖ್ಯಾತ ವೈದ್ಯ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಸಮಿತಿ ಎಲ್ಲಾ ಸಾಧ್ಯತೆ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸುತ್ತಿದೆ. ಸಮಿತಿ ವರದಿ ನೀಡಿದ ನಂತರ ನ್ಯಾಯಾಲಯಕ್ಕೆ ವಿವರ ಸಲ್ಲಿಸಲಾಗುವುದು ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಪ್ರಸ್ತುತ ಸೋಂಕು ಕಡಿಮೆಯಾಗುತ್ತಿರುವ ಮಾಹಿತಿ ಇದೆ. ಹಾಗೆಂದು ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳನ್ನು ಮುಚ್ಚುವಂತಿಲ್ಲ, ಮುಂದಿನ ದಿನಗಳಿಗೆ ಅವುಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ ಎಂದು ಸೂಚಿಸಿತು.

ಆಕ್ಸಿಜನ್ ದಾಸ್ತಾನು ಮಾಡಿ :

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಸೋಂಕು ತಗ್ಗಿದ್ದು, ಆ್ಯಕ್ಸಿಜೆನ್ ಬೇಡಿಕೆಯೂ ಕುಸಿದಿದೆ. ಸದ್ಯಕ್ಕೆ ಆಕ್ಸಿಜನ್ ಕೊರತೆ ಇಲ್ಲವಾದರೂ, ಸುಪ್ರೀಂಕೋರ್ಟ್ ಆದೇಶದಂತೆ ಬಫರ್ ಸ್ಟಾಕ್ ಮಾಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸಂಭಾವ್ಯ ಮೂರನೇ ಅಲೆ ಎದುರಿಸಲು ಸಂಗ್ರಹಿಸಿಡಿ ಎಂದು ಸೂಚಿಸಿತು.

ಚಾಮರಾಜನಗರ ಘಟನೆ ಜೂ.10ಕ್ಕೆ ವಿಚಾರಣೆ :

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆ್ಯಕ್ಸಿಜೆನ್ ಸಿಗದೇ 24 ಸೋಂಕಿತರು ಮೃತಪಟ್ಟ ಘಟನೆಯ ಬಗ್ಗೆ ಜೂ.10 ರಂದು ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿತು. ವಿಚಾರಣೆ ವೇಳೆ ಪ್ರಕರಣದ ಕುರಿತು ಪ್ರಸ್ತಾಪಿಸಿದ ಪೀಠ, ಸರ್ಕಾರ ನೀಡಿರುವ 2 ಲಕ್ಷ ಪರಿಹಾರ ಮೊತ್ತ ಅತ್ಯಲ್ಪವಾಗಿದ್ದು, ಪರಿಹಾರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಾಗೂ ದುರ್ಘಟನೆಯಲ್ಲಿ ಎಷ್ಟು ಸೋಂಕಿತರು ಮೃತಪಟ್ಟರು ಎಂಬ ಕುರಿತು ಮುಂದಿನ ವಿಚಾರಣೆ ವೇಳೆ ನಿರ್ಧರಿಸಲಾಗುವುದು ಎಂದಿತು.

ABOUT THE AUTHOR

...view details