ಬೆಂಗಳೂರು: ಬಿಜೆಪಿಯಿಂದ ಕಾಂಗ್ರೆಸ್ಗೆ ಲೀಗಲ್ ನೋಟಿಸ್ ನೀಡಿರುವ ಕುರಿತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕೊರೊನಾ ಉಪಕರಣ ಖರೀದಿಯಲ್ಲಿ ಅಕ್ರಮವನ್ನು ನಾವು ಬಯಲಿಗೆ ಎಳೆದಿದ್ದೇವೆ. ಅದಕ್ಕೆ ಸಿಎಂ ಪರಿಷತ್ ಸದಸ್ಯರಿಂದ ನೋಟಿಸ್ ಕಳಿಸಿದ್ದಾರೆ. ವಕೀಲರಿಂದ ನನಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ನೋಟಿಸ್ ಕಳುಹಿಸಿದ್ದಾರೆ. ಸಂತೋಷ, ಇದಕ್ಕೆ ಕಾನೂನಿನ ಮೂಲಕವೇ ಉತ್ತರ ಕೊಡ್ತೇವೆ ಎಂದು ಹೇಳಿದ್ದಾರೆ.
ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಲ್ಲವೇ ಸಚಿವರು ಅಥವಾ ಮುಖ್ಯ ಕಾರ್ಯದರ್ಶಿಯವರಿಂದ ಲೀಗಲ್ ನೋಟಿಸ್ ಬರಬಹುದೆಂಬ ನಿರೀಕ್ಷೆ ಇತ್ತು. ಒಬ್ಬ ಎಂಎಲ್‌ಸಿಯಿಂದ ಕೊಡಿಸಿದ್ದಾರೆ. ಈ ರೀತಿ ನಮ್ಮನ್ನು ಹೆದರಿಸಬಹುದೆಂದು ಅವರು ನಿರೀಕ್ಷಿಸಿದ್ದರೆ ಅದು ಸರ್ಕಾರದ ಮೂರ್ಖತನ. ನಮ್ಮ ಹೋರಾಟವನ್ನು ನಾವು ಜನರ ಬಳಿ ಕೊಂಡೊಯ್ಯುತ್ತಿದ್ದೇವೆ ಎಂದು ವಿವರಿಸಿದ್ದಾರೆ.
ಕೊರೊನಾ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ ಭಾರಿ ಮೊತ್ತದ ಅವ್ಯವಹಾರ ಆಗಿದೆ ಎನ್ನುವುದರ ಕುರಿತಾದ ತಮ್ಮ ಆರೋಪದಿಂದ ಹಿಂದೆ ಸರಿಯುವುದಿಲ್ಲ ಎಂಬ ವಿವರ ನೀಡಿದ್ದಾರೆ. 4,000 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳ ಖರೀದಿಯಲ್ಲಿ ಕನಿಷ್ಠ 2,000 ಕೋಟಿಯಷ್ಟು ಮೊತ್ತದ ಅಕ್ರಮ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದರು. ಇದಕ್ಕೆ ಸರ್ಕಾರದ ಐವರು ಸಚಿವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದರು. ಅಕ್ರಮ ನಡೆದಿಲ್ಲ ಎಂದು ತಿಳಿಸಿದ್ದರು. ಇದರ ನಂತರವೂ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹಾಗೂ ಡಿಕೆಶಿ ಆರೋಪ ಮುಂದುವರಿಸಿದ ಹಿನ್ನೆಲೆ ಸರ್ಕಾರ ಇದೀಗ ಪ್ರತಿ ಪಕ್ಷದ ನಾಯಕರಿಗೆ ನೋಟಿಸ್ ನೀಡಿದೆ.