ಬೆಂಗಳೂರು:ನೀರಾವರಿ ನಿಗಮಗಳಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ದುರುಪಯೋಗ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಸಂಪನ್ಮೂಲ ಇಲಾಖೆ ನೀರವಾರಿ ನಿಗಮಗಳಲ್ಲಿನ ಹಣಕಾಸು ವಹಿವಾಟುಗಳನ್ನು ವಿಶೇಷ ಆಡಿಟ್ಗೊಳಪಡಿಸಲು ನಿರ್ಧರಿಸಿದೆ.
ಜಲಸಂಪನ್ಮೂಲ ಇಲಾಖೆಗೆ ಪ್ರತಿ ಬಜೆಟ್ನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ವಿವಿಧ ನೀರಾವರಿ ನಿಗಮಗಳ ಮೂಲಕ ಸಾವಿರಾರು ಕಾಮಗಾರಿಗಳು ನಡೆಯುತ್ತಿರುತ್ತವೆ. ಇಲಾಖೆ ವ್ಯಾಪ್ತಿಯಲ್ಲಿ ಕೃಷ್ಣಾ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳು ಕಾರ್ಯ ನಿರ್ವಹಿಸುತ್ತಿವೆ.
ಈ ನೀರಾವರಿ ನಿಗಮಗಳಿಗೆ ಸಾವಿರಾರು ಕೋಟಿ ರೂ.ಪ್ರತಿ ವರ್ಷ ಅನುದಾನ ಹಂಚಿಕೆಯಾಗುತ್ತದೆ. ಪ್ರಮುಖ ನಾಲೆ, ಕಾಲುವೆ, ನೀರಾವರಿ ಕಾಮಗಾರಿಗಳನ್ನು ಈ ನಿಗಮದ ಮೂಲಕವೇ ಅನುಷ್ಠಾನಗೊಳಿಸಲಾಗುತ್ತದೆ. ಸರ್ಕಾರವೇ ನಿಗಮಗಳಿಗೆ ಸಾವಿರಾರು ಕೋಟಿ ಸಾಲ ಮಾಡಿ ಕೊಡುತ್ತದೆ.
ಹಣ ದುರುಪಯೋಗದ ಆರೋಪ:
ಬೃಹತ್ ಪ್ರಮಾಣದ ಅನುದಾನ ಜಲಸಂಪನ್ಮೂಲ ಇಲಾಖೆಗೆ ಹಂಚಿಕೆಯಾಗುತ್ತಿದೆ. ಇದರ ಜತೆಗೆ ಈ ನೀರಾವರಿ ನಿಗಮಗಳಲ್ಲಿ ಸಾವಿರಾರು ಕೋಟಿ ಹಣ ದುರುಪಯೋಗದ ಆರೋಪ ಕೇಳಿ ಬರುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಹಣ ದುರುಪಯೋಗ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಕರ್ನಾಟಕ ನೀರಾವರಿ ನಿಗಮದ ನಕಲಿ ಬಿಲ್ ಹಗರಣ:
ಇತ್ತೀಚೆಗೆ ಕರ್ನಾಟಕ ನೀರಾವರಿ ನಿಗಮದಲ್ಲಿ ನಕಲಿ ಬಿಲ್ ಹಗರಣ ಬೆಳಕಿಗೆ ಬಂದಿತ್ತು. ನಿಗಮದ ವ್ಯಾಪ್ತಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗ (ಬೆಳಗಾವಿ ವಲಯ), ನೀರಾವರಿ ಯೋಜನಾ ವಿಭಾಗ ನಂ.1 (ಕಲಬರುಗಿ ವಲಯ) ಮತ್ತು ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ ನಂ.4, ಸಿರವಾರ (ಮುನಿರಾಬಾದ್ ವಲಯ) ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು ಬೆಳಕಿಗೆ ಬಂದಿತ್ತು. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರ ಆದೇಶಿಸಿತ್ತು.
23 ಅಧಿಕಾರಿಗಳ ಅಮಾನತು:
ಅಥಣಿಯ ಹಿಪ್ಪರಗಿ ಬ್ಯಾರೇಜ್ ಯೋಜನಾ ವಿಭಾಗದಲ್ಲಿ 8 ನಕಲಿ ಬಿಲ್ಗಳನ್ನು ಸೃಷ್ಟಿಸಿ 16.62 ಕೋಟಿ ರೂ. ದುರ್ಬಳಕೆ ಮಾಡಲಾಗಿತ್ತು. ಅದರ ಬೆನ್ನಲ್ಲೇ ನಿಗಮದ ಕಲಬುರ್ಗಿ ಹಾಗೂ ಮುನಿರಾಬಾದ್ ವಲಯ ಕಚೇರಿಗಳಲ್ಲಿ 20 ನಕಲಿ ಬಿಲ್ ಸೃಷ್ಟಿಸಿ 11.73 ಕೋಟಿ ರೂ. ದುರುಪಯೋಗ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಒಟ್ಟು 23 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.