ಆನೇಕಲ್:ರಾಜ್ಯ ರಾಜಧಾನಿಗೆ ಕಾವೇರಿ ನದಿಯೇ ನೀರಿನ ಮೂಲವಾದರೂ ಜಿಲ್ಲೆಯ ಕೆಲ ಭಾಗಗಳಿಗೆ ಕುಡಿಯುವ ನೀರಿನ ಕೊರತೆ ಮತ್ತು ನೀರಿನ ಘಟಕಗಳು ಹಾಳಾಗಿ ಸಮಸ್ಯೆ ತಲೆದೋರಿದೆ. ಬೆಂಗಳೂರು- ಬನ್ನೇರುಘಟ್ಟ ಮುಖ್ಯರಸ್ತೆಯ ಬಸವನಪುರದ ವಾರ್ಡ್ ಸಂಖ್ಯೆ 192ರಲ್ಲಿ ಕಳೆದ 6 ತಿಂಗಳಿನಿಂದ ಸಮರ್ಪಕ ನೀರಿನ ಸರಬರಾಜು ಇಲ್ಲದೇ ಜನರು ಪರದಾಡುವಂತಾಗಿದೆ.
ಇದರಿಂದ ರೋಸಿ ಹೋದ ಜನರು ಇಂದು ಖಾಲಿ ಕೊಡಗಳ ಸಮೇತ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು. ಚುನಾವಣೆ ವೇಳೆ ವೋಟು ಕೇಳಲು ಬಂದ ಶಾಸಕರು ಈವರೆಗೂ ಈ ಕಡೆ ಬಂದಿಲ್ಲ. ಇದರಿಂದ ವಾರ್ಡ್ನಲ್ಲಿ ಸಮಸ್ಯೆಗಳು ಇನ್ನಷ್ಟು ಬಿಗಡಾಯಿಸಿವೆ. ಶೀಘ್ರವೇ ಜನಪ್ರತಿನಿಧಿಗಳು ಕ್ರಮ ಕೈಗೊಂಡು ವಾರ್ಡ್ಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಬಿಬಿಎಂಪಿ ಎಇಇ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ಇರುವ ಬೋರ್ವೆಲ್ ಕೆಟ್ಟು ವರ್ಷಗಳಾಗಿವೆ. ಅದನ್ನು ಸರಿಪಡಿಸದೇ ರಸ್ತೆಗೆ ಹಾಗೆಯೇ ಬಿಸಾಡಲಾಗಿದೆ. ಬಸವನಪುರದ ವಾರ್ಡ್ನ ಮುಖ್ಯ ರಸ್ತೆಯೂ ಹಾಳಾಗಿದೆ. ಚರಂಡಿಗಳು ಸಮರ್ಪಕವಾಗಿಲ್ಲ. ಬೀದಿ ದೀಪಗಳು ನಿರ್ವಹಣೆಯಿಲ್ಲದೇ ಹಾಳಾಗಿವೆ. ಶಾಸಕರನ್ನು ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ಬಂದಾಗ ಕಂಡಿರುವುದು ಬಿಟ್ಟರೆ, ಈವರೆಗೆ ಅವರ ಸುಳಿವಿಲ್ಲ ಎಂದು ನಿವಾಸಿಗಳು ದೂರಿದರು.