ಬೆಂಗಳೂರು: ಬರದಿಂದ ಇಡೀ ರಾಜ್ಯವೇ ತತ್ತರಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರ ನಿರ್ವಹಣೆ ಜೊತೆಗೆ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಮುಂದಾಗಿದ್ದರೂ ಬರು ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂಬ ಆಪಾದನೆ ಕೇಳಿಬರುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಬಹುತೇಕ ಪ್ರದೇಶಗಳು ಕಡಿಮೆ ಮಳೆ ಕಂಡಿದ್ದರಿಂದ ಬರಕ್ಕೆ ತುತ್ತಾಗಿವೆ. ಜೊತೆಗೆ ಅಂತರ್ಜಲದ ಮಟ್ಟ ಪಾತಾಳ ಕಂಡಿದ್ದು, ಕುಡಿಯುವ ನೀರಿಗೆ ಜನ- ಜಾನುವಾರುಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.
ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಕೋಟ್ಯಾಂತರ ರೂಪಾಯಿ ಅನುದಾನವನ್ನು ಈಗಾಗಲೇ ಒದಗಿಸಿದೆ. ಜಿಲ್ಲೆಯ 72 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ 36 ಕಡೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪಡೆದು ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡರು ಹೇಳಿದರು.
ಜಿಲ್ಲೆಯ ದೇವನಹಳ್ಳಿ, ವಿಜಯಪುರ, ನೆಲಮಂಗಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿಲ್ಲ. ನಗರಸಭೆ ವ್ಯಾಪ್ತಿಗಳಲ್ಲಿ ಹೆಚ್ಚಿನ ಸಮಸ್ಯೆ ಇದ್ದು, ಮುಂಗಾರು ಪೂರ್ವ ಮಳೆ ಬೀಳದಿದ್ದರೇ ನೀರಿನ ಅಭಾವ ಇನ್ನಷ್ಟು ತಲೆದೋರಲಿದೆ.
ಸದ್ಯಕ್ಕೆ ಕೆಲವೊಂದು ಕಡೆ ಸರ್ಕಾರಿ ಕೊಳವೆ ಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಸಮಸ್ಯೆ ಹೆಚ್ಚಾಗದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೇಂದ್ರಗಳನ್ನು ತೆರೆಯಲಾಗಿದ್ದು, ನೀರಿನ ಸಮಸ್ಯೆಗಳ ದೂರು ಬಂದ ಗಂಟೆಯೊಳಗೆ ಬಗೆಹರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.