ಬೆಂಗಳೂರು: ಪರವಾನಗಿ ಅವಧಿ ಮುಗಿದ ನಂತರವೂ ನಾಲ್ಕು ವರ್ಷಗಳ ಕಾಲ ಬೆಂಗಳೂರು ಹೊರವಲಯದ ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಿರುವ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಮೇಲೆ ಹೈಕೋರ್ಟ್ ಗರಂ ಆಗಿ, ಈ ಕುರಿತು ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.
ಬಿಬಿಎಂಪಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ: ಕೆಎಸ್ಪಿಸಿಬಿಗೆ ಹೈಕೋರ್ಟ್ ಪ್ರಶ್ನೆ - ಬೆಳ್ಳಹಳ್ಳಿ ಕಲ್ಲು ಕ್ವಾರಿಯಲ್ಲಿ ಘನತ್ಯಾಜ್ಯ ವಿಲೇವಾರಿ
ನಗರದ ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ವಿವಿಧ ಸಂಘಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
![ಬಿಬಿಎಂಪಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ: ಕೆಎಸ್ಪಿಸಿಬಿಗೆ ಹೈಕೋರ್ಟ್ ಪ್ರಶ್ನೆ high-court-upset-over-kspcb](https://etvbharatimages.akamaized.net/etvbharat/prod-images/768-512-6323429-thumbnail-3x2-bbmpjpg.jpg)
ನಗರದ ಘನ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿರುದ್ಧ ವಿವಿಧ ಸಂಘಸಂಸ್ಥೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ಬೆಳ್ಳಹಳ್ಳಿ ಕ್ವಾರಿಯಲ್ಲಿ ಘನತ್ಯಾಜ್ಯ ಸುರಿಯಲು ಕೊಡಲಾಗಿದ್ದ ಪರವಾನಗಿ ಅವಧಿ 2015ರ ಡಿಸೆಂಬರ್ ತಿಂಗಳಾಂತ್ಯಕ್ಕೆ ಮುಗಿದಿದೆ. ಆದರೆ 2019ರ ಸೆ.13ರವರೆಗೆ ಕ್ವಾರಿಯಲ್ಲಿ ಕಾನೂನು ಬಾಹಿರವಾಗಿ ಮತ್ತು ಅವೈಜ್ಞಾನಿಕವಾಗಿ ಕಸ ಸುರಿಯಲಾಗಿದೆ. ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್15 ರ ಪ್ರಕಾರ ಇದು ಅಪರಾಧ. ಇದು ಅವ್ಯಾಹತವಾಗಿ ನಡೆದಿದ್ದರೂ ಬಿಬಿಎಂಪಿ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಇದೊಂದು ಆಘಾತಕಾರಿ ವಿಚಾರ. ಬೆಳ್ಳಹಳ್ಳಿ ಕ್ವಾರಿಯ ಭೂಭರ್ತಿ ವಿಧಾನ ತುಂಬಾ ಅವೈಜ್ಞಾನಿವಾಗಿದೆ. 2019ರ ಅಕ್ಟೋಬರ್ ತಿಂಗಳಿಂದ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ಕಸ ಸುರಿಯಲಾಗುತ್ತಿದೆ. ಈ ಕ್ರಮ ಮುಂದಿನ ದಿನಗಳಲ್ಲಿ ಬಹಳ ದುಷ್ಪರಿಣಾಮ ಬೀರಬಹುದು. ಇಂತಹ ಕಾರ್ಯಕ್ಕೆ ಅನುಮತಿಸಿದ ಮತ್ತು ಅವಧಿ ಮುಗಿದ ನಂತರವೂ ಕಸ ಸುರಿದ ಬಿಬಿಎಂಪಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ಕೆಎಸ್ಪಿಸಿಬಿ ಮುಂದಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿತು. ಇದೇ ವೇಳೆ, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಲೋಚನೆ ಹೊಂದಿರುವ ಯೋಜನೆಯ ಅವಶ್ಯಕತೆ ಇದೆ. ಈ ಬಗ್ಗೆ ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸರ್ಕಾರ, ಬಿಬಿಎಂಪಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಏ.9ಕ್ಕೆ ಮಂದೂಡಿತು.