ಬೆಂಗಳೂರು: 2020ರ ವಿಶೇಷ ಮತದಾನ ನೋಂದಣಿಯನ್ನು ಸೆಪ್ಟೆಂಬರ್ 1ರಿಂದ (ನಾಳೆಯಿಂದ) ಆರಂಭಿಸಿರುವ ಚುನಾವಣಾ ಆಯೋಗ, ಜನವರಿ 8ರವರೆಗೂ ಮತದಾರರು ತಮ್ಮ ಹೆಸರು ಸೇರಿಸಲು ಅವಕಾಶ ನೀಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷ ನಡೆಯಲಿದೆ. 2020 ಜನವರಿ 1ಕ್ಕೆ 18 ವರ್ಷ ತುಂಬುವವರು ಅರ್ಜಿ ಸಲ್ಲಿಸಬಹುದು. ಜತೆಗೆ ಗುರುತಿನ ಚೀಟಿಯಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು. ಸೆಪ್ಟೆಂಬರ್ 1ರಿಂದ 2020ರ ಜನವರಿ 8ರವರೆಗೆ ಇದಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಮತದಾರರ ಹೆಸರು ಬಿಟ್ಟು ಹೋಗಿದೆ ಎಂದು ಆಕ್ಷೇಪಗಳು ಬಂದಿದ್ದವು. ರಾಜಕೀಯ ಪಕ್ಷಗಳ ನಾಯಕರ ಪಾತ್ರ ಈಗ ಪ್ರಮುಖ. ಈಗಲೇ ತಪ್ಪಿದ್ದಲ್ಲಿ ಸರಿಪಡಿಸಲು ಇದು ಸಕಾಲ. ಅಧಿಕಾರಿಗಳ ಜತೆ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೂತ್ ಮಟ್ಟದ ಏಜೆಂಟರನ್ನು ನೇಮಿಸಿದರೆ ಉತ್ತಮ. ಆಗ ನಕಲಿ ಮತದಾರರ ಹಾವಳಿ ತಪ್ಪಲಿದೆ ಎಂದು ಹೇಳಿದರು.