ಬೆಂಗಳೂರು: ವೇಗದಲ್ಲಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರಿಗೆ ದೂರದೃಷ್ಟಿಯ ಯೋಜನೆ ರೂಪಿಸಲು ವಿಷನ್ ಡಾಕ್ಯುಮೆಂಟ್ ತಯಾರು ಮಾಡಲಾಗುವುದು. ಯಾವ ರೀತಿ ಬೆಂಗಳೂರು ಬೆಳವಣಿಗೆಯಾಗಬೇಕು ಎಂದು ಯೋಜನಾಬದ್ಧವಾಗಿ ಕೆಲಸ ಮಾಡಲಾಗುವುದು. ಹಲವಾರು ಹೊಸ ಯೋಜನೆಗಳನ್ನು ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯಕ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಉಲ್ಲಾಳ ಮತ್ತು ಅನ್ನಪೂರ್ಣೇಶ್ವರಿ ನಗರಗಳ ಮುಖ್ಯರಸ್ತೆಗೆ ಅಡ್ಡಲಾಗಿ ಕೆಂಗೇರಿ ಹೊರವರ್ತುಲ ರಸ್ತೆಯಿಂದ ಗ್ರೇಡ್ ಸೆಪರೇಟ್ ನಿರ್ಮಾಣದ ಕಾಮಗಾರಿ, ರಾ.ಹೆ.-ತುಮಕೂರು ರಸ್ತೆ ಜಂಕ್ಷನ್‍ನಿಂದ ನಾಯಂಡಹಳ್ಳಿ ಜಂಕ್ಷನ್‍ವರೆಗೆ (ಒ.ಆರ್.ಆರ್) ಮತ್ತು ಸುಮನಹಳ್ಳಿ ಜಂಕ್ಷನ್‍ನಿಂದ ಅಂಬೇಡ್ಕರ್ ಕಾಲೇಜುವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಸೇತುವೆಗಳು ಮತ್ತು ಇತರ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ಸಿಎಂ ಬಸವರಾಜ ಬೊಮ್ಮಾಯಿ ನೆರವೇರಿಸಿ ಮಾತನಾಡಿದರು.
ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶವಿಲ್ಲ:ನಗರದ ಆರೋಗ್ಯ, ಸುರಕ್ಷತೆಗೆ ಫ್ಲೆಕ್ಸ್ ಒಳ್ಳೆಯದಲ್ಲ. ಇನ್ನು ಮುಂದೆ ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು. ಜನ ಫ್ಲೆಕ್ಸ್ ಚಟ ಬಿಡಬೇಕು. ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು. 250 ಕೋಟಿಗಿಂತ ಹೆಚ್ಚು ಕಾಮಗಾರಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಭದ್ರ ಬುನಾದಿ ಹಾಕಿ ಕಟ್ಟಿದ್ದಾರೆ. ಅವರು ಸ್ಥಾಪನೆ ಮಾಡುವಾಗ 200 ವರ್ಷಗಳವರೆಗೆ ಬೆಂಗಳೂರು ಹೇಗಿರಬೇಕೆಂಬ ಕಲ್ಪನೆಯಿಂದ ಕಟ್ಟಿದರು. ಇಷ್ಟು ಬೃಹತ್ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಜನ ವಲಸೆ ಬಂದಿದ್ದಾರೆ. ನಿರಂತರವಾಗಿ ಈ ನಗರದಲ್ಲಿ ಅಭಿವೃದ್ಧಿ ಆಗಬೇಕು. ವಿಧಾನಸಭೆಗಿಂತ ಹೆಚ್ಚು ಸದಸ್ಯರು ಬಿಬಿಎಂಪಿಯಲ್ಲಿದ್ದಾರೆ. ಒಬ್ಬ ಆಯುಕ್ತರು ಇಷ್ಟು ದೊಡ್ಡ ಬೆಂಗಳೂರನ್ನು ನಿಭಾಯಿಸುವುದು ಅತ್ಯಂತ ಕಷ್ಟಸಾಧ್ಯ ಎಂದರು.
ಮೂರು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ನಗರೋತ್ಥಾನ ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿ, ಕಾರ್ಯವನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ನಲ್ಲಿ ಕೊಡುವ ಅನುದಾನವನ್ನು ಜನವರಿಯಲ್ಲಿ ನೀಡಿದ್ದರಿಂದ ಕೆಲಸಗಳು ಪ್ರಾರಂಭವಾಗಿವೆ.