ಬೆಂಗಳೂರು :ತಮಿಳುನಾಡು ಮೂಲದ 'ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್' ಸಂಸ್ಥೆ ಠೇವಣಿದಾರರು ಮತ್ತು ಹೂಡಿಕೆದಾರರಿಗೆ ವಂಚಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಸಂಸ್ಥೆ ಠೇವಣಿದಾರರಿಗೆ ಮತ್ತು ಹೂಡಿಕೆದಾರರಿಗೆ ಹಣ ನೀಡದೆ ವಂಚಿಸಿದ ಆರೋಪದಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಸಿಐಡಿಗೆ ವಹಿಸುವುದಾಗಿ ಸರ್ಕಾರ ಸ್ಪಷ್ಟನೆ ನೀಡಿದ ಹಿನ್ನೆಲೆ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್ಐಆರ್‌ಗಳ ಮೇರೆಗೆ ತ್ವರಿತ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿದೆ. ವಂಚನೆ ಎಸಗಿರುವ ಸಂಸ್ಥೆಯ ವಿರುದ್ಧ ಏಕೀಕೃತ ತನಿಖೆ ನಡೆಸುವಂತೆ ಕೋರಿ 'ವಿಶ್ವಪ್ರಿಯ ಇನ್ವೆಸ್ಟರ್ಸ್ ಅಂಡ್ ಡೆಪಾಸಿಟರ್ಸ್ ವೆಲ್ ಫೇರ್ ಅಸೋಸಿಯೇಷನ್' ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ 13 ಎಫ್‌ಐಆರ್‌ಗಳನ್ನು ಸಿಐಡಿಗೆ ಹಸ್ತಾಂತರಿಸಿ 2021ರ ಸೆ.24ರಂದು ಆದೇಶ ಹೊರಡಿಸಿದೆ. ಅರ್ಜಿದಾರರ ಮನವಿಯಂತೆ ಎಲ್ಲ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಒಂದೇ ತನಿಖಾ ಸಂಸ್ಥೆಗೆ ವಹಿಸಿದೆ. ಹೀಗಾಗಿ, ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ಅಭಿಪ್ರಾಯಪಟ್ಟಿದೆ.