ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಮಳೆಹಾನಿ ಪರಿಹಾರ ಕಾರ್ಯಾಚರಣೆ ಕುರಿತು ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಸಭೆ ನಿಗದಿಯಾಗಿದೆ.
ದೇವನಹಳ್ಳಿ ರಸ್ತೆಯ ಖಾಸಗಿ ರೆಸಾರ್ಟ್ನಿಂದಲೇ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿರುವ ಸಿಎಂ, ಮಳೆ ಹಾನಿ, ಪುನರ್ವಸತಿ, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ. ಇತ್ತೀಚೆಗೆ ಸಿಎಂ ಬೊಮ್ಮಾಯಿ ಮಳೆಹಾನಿ ವೀಕ್ಷಣೆಗಾಗಿ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರುಗಳು, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
ಮಳೆ ಹಾನಿ ವೀಕ್ಷಣೆಗೆ ದಕ್ಷಿಣಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಮಂಗಳೂರಿನ ಉಳ್ಳಾಲದ ಬಟ್ಟಪಾಡಿಯಲ್ಲಿ ಕಡಲ್ಕೊರೆತ ವೀಕ್ಷಿಸಿದ್ದರು. ಬಳಿಕ ಮಾತನಾಡಿದ ಅವರು, ಕಡಲ್ಕೊರೆತದ ತೀವ್ರತೆಯನ್ನು ತಡೆಗಟ್ಟಲು ಸೀ ವೇವ್ ಬ್ರೇಕರ್ ಅನ್ನು ಶೀಘ್ರದಲ್ಲೇ ಅಳವಡಿಸಲಾಗುವುದು. ತಜ್ಞರ ತಂಡವೊಂದು ಈ ತಂತ್ರಜ್ಞಾನ ಮೂಲಕ ಕಡಲ್ಕೊರೆತ ತಡೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಉಳ್ಳಾಲ ಭಾಗದಲ್ಲಿ ಅನುಷ್ಠಾನ ಮಾಡಲು ಅವರಿಗೆ ಅನುಮತಿ ನೀಡಿದ್ದೇನೆ. ಕಡಲಿನ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳ ಸ್ಥಳಾಂತರ ಮಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಸರ್ಕಾರದಿಂದ ಯಾತ್ರಿಕರಿಗೆ ಸಹಾಯಧನ.. ಕಾಶಿ ಯಾತ್ರೆ ವೆಬ್ಸೈಟ್ಗೆ ಸಿಎಂ ಚಾಲನೆ
ಕೊಡಗು ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಕೊಯನಾಡುವಿನಲ್ಲಿರುವ ಗಣಪತಿ ದೇವಾಲಯದ ಸಮುದಾಯ ಭವನದಲ್ಲಿರುವ ಕಾಳಜಿ ಕೇಂದ್ರಕ್ಕೆ ಸಿಎಂ ಭೇಟಿ ನೀಡಿದ್ದರು. ಸಂತ್ರಸ್ತರ ಅಳಲು ಆಲಿಸಿ ಎಲ್ಲ ಸೌಲಭ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ, ಎರಡು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಆ ಮನೆಯವರಿಗೆ 5 ಲಕ್ಷ ರೂ ಪರಿಹಾರ ನೀಡಲಾಗುವುದು. 15 ಮನೆಗಳಿಗೆ ತೀವ್ರ ಸ್ವರೂಪದ ಹಾನಿಯಾಗಿದ್ದು, 3 ಲಕ್ಷ ರೂ ಪರಿಹಾರ ಕೊಡಲಾಗುವುದು. 63 ಮನೆಗಳಿಗೆ ಸಾಧಾರಣ ಹಾನಿಯಾಗಿದ್ದು, 50 ಸಾವಿರ ರೂ ಪರಿಹಾರ ನೀಡಲಾಗುವುದು ಎಂದು ಹೇಳಿದ್ದರು.
ಈ ಹಿಂದೆ ಮಳೆ ಹಾನಿ ಕುರಿತು ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದಾಗ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಿಎಂ, ಈ ಬಾರಿ ಮಳೆಗೆ ರಾಜ್ಯದಲ್ಲಿ 32 ಜೀವ ಹಾನಿಯಾಗಿದೆ. 5 ಜನ ಕಾಣೆಯಾಗಿದ್ದಾರೆ. 34 ಮಂದಿ ಗಾಯಗೊಂಡಿದ್ದಾರೆ. ಸುಮಾರು 300 ಜನರನ್ನು ರಕ್ಷಿಸಲಾಗಿದೆ. ನಾಲ್ಕು ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಕೆಲಸ ಮಾಡುತ್ತಿವೆ. ಭೂಕಂಪನ, ಭೂಕುಸಿತದ ಕುರಿತು ಅಮೃತ ವಿವಿಯವರು ಅಧ್ಯಯನ ಮಾಡುತ್ತಿದ್ದಾರೆ. ವರದಿ ಬಂದ ಕೂಡಲೇ ಸರ್ಕಾರ ಪರಿಹಾರ ನೀಡಲು ಸಿದ್ಧವಿದೆ. ಕಡಲ್ಕೊರೆತಕ್ಕೆ ಎಡಿಬಿ ಮೂಲಕ 300 ಕೋಟಿ ರೂ ಖರ್ಚಾಗಿದೆ. ಕೇರಳ ಮಾದರಿಯಲ್ಲಿ ಒಂದು ಕಿಲೋಮೀಟರ್ ಕಡಲಿಗೆ ತಡೆಗೋಡೆ ನಿರ್ಮಾಣ ಮಾಡುವ ಚಿಂತನೆ ಇದೆ. ಶಾಶ್ವತ ಪರಿಹಾರಕ್ಕೆ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.