ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತಮ್ಮ ಹೆಸರನ್ನು ಪರಿಗಣಿಸಿ ಹೈಕಮಾಂಡ್ಗೆ ಕಳುಹಿಸಿ ಕೊಟ್ಟಿರುವುದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹರ್ಷ ವ್ಯಕ್ತಪಡಿಸಿದ್ದು, ಹೈಕಮಾಂಡ್ ನಿರ್ಧಾರ ಕಾದು ನೋಡೋಣ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ ಸ್ಥಾನಕ್ಕೆ ನನ್ನ ಹೆಸರನ್ನು ಕೋರ್ ಕಮಿಟಿ ಕೇಂದ್ರಕ್ಕೆ ಶಿಪಾರಸು ಮಾಡಿದೆ. ಅದಕ್ಕಾಗಿ ಕೋರ್ ಕಮಿಟಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೇಂದ್ರದವರ ತೀರ್ಮಾನ ಬಾಕಿ ಇದೆ. ಹೈಕಮಾಂಡ್ ತೀರ್ಮಾನಕ್ಕೆ ಎರಡು, ಮೂರು ದಿನ ಬೇಕಾಗಬಹುದು. ಪಕ್ಷ ಏನೇ ಜವಾಬ್ದಾರಿ ನೀಡಿದರೂ ನಾನು ನಿರ್ವಹಣೆ ಮಾಡುತ್ತೇನೆ, ನನ್ನ ಹೆಸರನ್ನು ಶಿಫಾರಸು ಮಾಡಿದ್ದಕ್ಕೆ ಸಂತೋಷವಾಗಿದೆ ಎಂದರು.
ಬಿಎಸ್ವೈ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್ : ಯಾರು ಯಾರನ್ನು ಯಡಿಯೂರಪ್ಪ ರಾಜಕೀಯವಾಗಿ ಬೆಳೆಸಿದ್ದಾರೆ ಎನ್ನೋದು ಗೊತ್ತಿದೆ, ಯಾರ ಹೆಸರನ್ನು ಹೇಳಲು ಹೋಗುವುದಿಲ್ಲ. ಈಗ ಸರ್ಕಾರ ಹೇಗೆ ನಡೆಯುತ್ತಿದೆ ಎನ್ನುವ ಅರಿವಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಅವರಿಂದ ರಾಜಕೀಯ ಲಾಭ ಪಡೆದು ಈಗ ವಿರೋಧ ವ್ಯಕ್ತಪಡಿಸುತ್ತಿರುವ ಪಕ್ಷದ ನಾಯಕರಿಗೆ ಬಿಎಸ್ವೈ ಪುತ್ರ ಟಾಂಗ್ ನೀಡಿದರು.