ಕರ್ನಾಟಕ

karnataka

ETV Bharat / city

ವಿಧಾನಪರಿಷತ್ ಏಳು ನೂತನ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ - ಪ್ರಮಾಣ ವಚನ ಸ್ವೀಕಾರ

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ಅವಿರೋಧವಾಗಿ ಆಯ್ಕೆಯಾಗಿದ್ದ ಏಳು ಮಂದಿ ಪ್ರಮಾಣವಚನ ಸ್ವೀಕರಿಸಿದರು.

vidhana-parishad-new-members-took-oath
ವಿಧಾನಪರಿಷತ್ ಏಳು ನೂತನ ಸದಸ್ಯರಿಂದ ಪ್ರಮಾಣವಚನ ಸ್ವೀಕಾರ

By

Published : Jun 16, 2022, 2:42 PM IST

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದ ಏಳು ಮಂದಿ ಪರಿಷತ್ ಹಂಗಾಮಿ ಸಭಾಪತಿ ರಘುನಾಥರಾವ್ ಮಲಕಾಪೂರೆ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸದಸ್ಯರನ್ನು ಪ್ರಮಾಣವಚನಕ್ಕೆ ಆಹ್ವಾನಿಸಿದರು. ಜೆಡಿಎಸ್‌ನ ಟಿ.ಎ.ಶರವಣ, ಬಿಜೆಪಿಯ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಹೇಮಲತಾ ಹಾಗು ಕಾಂಗ್ರೆಸ್‌ನ ಎಂ. ನಾಗರಾಜ್, ಅಬ್ದುಲ್ ಜಬ್ಬಾರ್ ಪ್ರಮಾಣವಚನ ಸ್ವೀಕರಿಸಿ ಮೇಲ್ಮನೆ ಸದಸ್ಯರಾದರು.


ಮೊದಲಿಗೆ ಕಾಂಗ್ರೆಸ್​ನ ಅಬ್ದುಲ್ ಜಬ್ಬಾರ್ ಅಲ್ಲಾನ ಹೆಸರಿನಲ್ಲೂ, ಲಕ್ಷ್ಮಣ ಸವದಿ, ಕೇಶವ್ ಪ್ರಸಾದ್, ಎಂ. ನಾಗರಾಜ್​ ಭಗವಂತನ ಹೆಸರಿನಲ್ಲೂ, ಛಲವಾದಿ ನಾರಾಯಣ ಸ್ವಾಮಿ ಸಂವಿಧಾನ ಶಿಲ್ಪಿ‌ ಅಂಬೇಡ್ಕರ್ ಹೆಸರಿನಲ್ಲೂ, ಟಿ.ಎ.ಶರವಣ ಶಿರಡಿ ಸಾಯಿ ಬಾಬಾ ಮತ್ತು ತಿರುಪತಿ ವೆಂಕಟೇಶ್ವರ ಹೆಸರಿನಲ್ಲೂ, ಹೇಮಲತಾ ನಾಯಕ್​ ವಾಲ್ಮೀಕಿ ಹೆಸರಿನಲ್ಲಿ ಪ್ರಮಾಣವಚನ ಪಡೆದರು.

ಶರವಣ ನೀಡಿದ ತಿರುಪತಿ ಲಡ್ಡನ್ನು ಕಂದಾಯ ಸಚಿವ ಆರ್.ಅಶೋಕ್ ಹೊಸ ಸದಸ್ಯರ ಬಳಿ ತೆರಳಿ ತಿನ್ನಿಸಿದರು. ಆಗ ಶಾಸಕ ಜಮೀರ್, "ನಿನ್ನ ಲಡ್ಡು ನಿನಗೆ" ಎಂದು ಶರವಣ ಅವರನ್ನುದ್ದೇಶಿಸಿ ಹಾಸ್ಯ ಚಟಾಕಿ ಹಾರಿಸಿದರು. ಆಗ "ಕೆರೆಯ ನೀರನ್ನೂ ಕೆರೆಗೆ ಚೆಲ್ಲಿ" ಎಂದು ಶರವಣ ಹೇಳಿದಾಗ ಸಮಾರಂಭ ನಗೆಗಡಲಿನಲ್ಲಿ ತೇಲಿತು.

ಕಾರ್ಯಕ್ರಮದಲ್ಲಿ ವಿಧಾನಸಭೆ ಉಪಾಧ್ಯಕ್ಷ ಆನಂದ್ ಮಾಮನಿ, ಸಚಿವರಾದ ಆರ್.ಅಶೋಕ್, ಕೋಟಾ ಶ್ರೀನಿವಾಸ ಪೂಜಾರಿ, ಮೇಲ್ಮನೆ ಆಡಳಿತ ಪಕ್ಷದ ಸಚೇತಕ ವೈ.ಎ.ನಾರಾಯಣಸ್ವಾಮಿ, ವಿರೋಧ ಪಕ್ಷದ ಸಚೇತಕ ಪ್ರಕಾಶ್ ರಾಥೋಡ್ ಶಾಸಕರಾದ ಎನ್.ಎ.ಹ್ಯಾರಿಸ್‌ ಇದ್ದರು.

ಇದನ್ನೂ ಓದಿ :ದಕ್ಷಿಣ ಪದವೀಧರ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ, ಘೋಷಣೆಯಷ್ಟೇ ಬಾಕಿ

ABOUT THE AUTHOR

...view details