ಬೆಂಗಳೂರು:ರಾಜ್ಯ ಚುನಾವಣಾ ಆಯುಕ್ತರ ನೇಮಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯ ಚುನಾವಣಾ ಆಯುಕ್ತರನ್ನಾಗಿ ಸರ್ಕಾರಿ ಅಧಿಕಾರಿಗಳನ್ನು ನೇಮಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪನ್ನು ನೀಡಿದೆ. ಸಂವಿಧಾನದ ಪ್ರಕಾರ, ರಾಜ್ಯ ಚುನಾವಣಾ ಆಯೋಗದ ಕಾರ್ಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸದೇ ಇರುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದೂ ಪೀಠವು ಹೇಳಿರುವುದು ಸ್ವಾಗತಾರ್ಹ ಎಂದಿದ್ದಾರೆ.
ರಾಜ್ಯ ಚುನಾವಣಾ ಆಯುಕ್ತರು ಸ್ವತಂತ್ರ ವ್ಯಕ್ತಿಯಾಗಿರಬೇಕು. ರಾಜ್ಯ ಸರ್ಕಾರದ ಅಧೀನದ ಯಾವುದೇ ಹುದ್ದೆಯಲ್ಲಿ ಇರಬಾರದು. ಸರ್ಕಾರದ ಹುದ್ದೆಯಲ್ಲಿರುವ ವ್ಯಕ್ತಿಯು ಎಸ್ಇಸಿ ಆಗಿ ನೇಮಕವಾದರೆ, ಅಧಿಕಾರ ವಹಿಸಿಕೊಳ್ಳುವುದಕ್ಕೆ ಮೊದಲೇ ಅವರು ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸಿರುವುದು ಸ್ವಾಗತಾರ್ಹ. ಸುಪ್ರೀಂ ಕೋರ್ಟ್ನ ಈ ಮಹತ್ವದ ತೀರ್ಪಿನಿಂದ ಚುನಾವಣಾ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಖಾಸಗೀಕರಣ ಖಂಡನೀಯ:
ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಮಾರ್ಚ್ 15 ಮತ್ತು 16ರಂದು ಬ್ಯಾಂಕ್ ನೌಕರರ ಮುಷ್ಕರ ಕರೆ ನೀಡಲಾಗಿದೆ. ಎರಡು ದಿನಗಳ ಕಾಲ ಬ್ಯಾಂಕ್ ಮುಷ್ಕರಕ್ಕೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಇಂಡಿಯಾ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್ ವಹಿವಾಟು ಬಂದ್ ಆಗಿದೆ. ಬ್ಯಾಂಕ್ ವಹಿವಾಟು ಸ್ಥಗಿತಗೊಂಡಿಡುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಬ್ಯಾಂಕ್ ಖಾಸಗೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಬ್ಯಾಂಕ್ ನೌಕರರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವ ಕೇಂದ್ರದ ಹಿಟ್ಲರ್ ನೀತಿ ಖಂಡನೀಯ ಎಂದಿದ್ದಾರೆ.
ಓದಿ:ಸಾರಿಗೆ ಸೌಲಭ್ಯದಿಂದ ವಂಚಿತ ಖಾದ್ಯಾಪುರ ಗ್ರಾಮ: ಕಮರುತ್ತಿದೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ!