ಕರ್ನಾಟಕ

karnataka

ETV Bharat / city

ನೆರೆಸಂತ್ರಸ್ತರಿಗೆ ಮತ್ತೊಂದು ತಲೆನೋವು: ಪರಿಹಾರ ಮೊತ್ತ ಪಡೆಯಲು ಅಫಿಡವಿಟ್ ಸಲ್ಲಿಕೆ ಕಡ್ಡಾಯ..!

ನೆರೆ ಪೀಡಿತ ಪ್ರದೇಶಗಳಲ್ಲಿ ಅನಧಿಕೃತ‌ ಮನೆಗಳಲ್ಲಿ ವಾಸವಾಗಿದ್ದ ಸಂತ್ರಸ್ತರು ಪರಿಹಾರ ಮೊತ್ತ ಪಡೆಯಬೇಕಾದರೆ ಅಫಿಡವಿಟ್ ಸಲ್ಲಿಸಬೇಕೆಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಅನಧಿಕೃತ ವಾಸಸ್ಥಳದಲ್ಲಿನ ಸಂತ್ರಸ್ತರು ಪರಿಹಾರ ಮೊತ್ತ ಪಡೆಯಲು ಅಫಿಡವಿಟ್ ಸಲ್ಲಿಸುವುದು ಕಡ್ಡಾಯ

By

Published : Oct 5, 2019, 3:45 AM IST

ಬೆಂಗಳೂರು:ನೆರೆ ಪೀಡಿತ ಪ್ರದೇಶಗಳಲ್ಲಿ ಅನಧಿಕೃತ‌ ಮನೆಗಳಲ್ಲಿ ವಾಸವಾಗಿದ್ದ ಸಂತ್ರಸ್ತರು ಪರಿಹಾರ ಮೊತ್ತ ಪಡೆಯಬೇಕಾದರೆ ಅಫಿಡವಿಟ್ ಸಲ್ಲಿಸಬೇಕೆಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

ಅನಧಿಕೃತ ವಾಸಸ್ಥಳ ಹೊಂದಿರುವ ಸಂತ್ರಸ್ತರು, ಪರಿಹಾರ‌ ಮೊತ್ತ ಕೋರಿದಲ್ಲಿ ಅಂತಹ ಫಲಾನುಭವಿಗಳು ಜಿಲ್ಲಾಡಳಿತಕ್ಕೆ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ. ಪ್ರಮಾ‌ಣ‌ಪತ್ರದಲ್ಲಿ ಸಂತ್ರಸ್ತರ ಸದರಿ ವಾಸ‌ಸ್ಥಳವು ಅನಧಿಕೃತವಾಗಿದ್ದು, ಇದನ್ನು ಜಿಲ್ಲಾಧಿಕಾರಿ ಅಧಿಕೃತ ವಾಸಸ್ಥಳ ಎಂದು ಪ್ರಮಾಣೀಕರಿಸಲು ಅವಕಾಶ ಇರುವುದಿಲ್ಲ ಎಂದು ಒಪ್ಪಿಕೊಳ್ಳಬೇಕು.

ನಾನು ವಾಸಿಸುತ್ತಿರುವ ಅನಧಿಕೃತ ಮನೆಗೆ ಪ್ರವಾಹದಿಂದ ಆದ ಹಾನಿಯ ಸಂಬಂಧ ಸರ್ಕಾರದಿಂದ ಕೊಡುವ ಪರಿಹಾರ ಮೊತ್ತವನ್ನು ಸ್ವ-ಇಚ್ಛೆಯಿಂದ ಬಯಸಿ, ಒಪ್ಪಿಗೆ ನೀಡುತ್ತಿದ್ದೇನೆ. ಇದರಿಂದ ಪ್ರಸ್ತುತ ವಾಸಿಸುತ್ತಿರುವ ಅನಧಿಕೃತ ವಾಸಸ್ಥಳದ ಮೇಲೆ ನನಗೆ ಯಾವುದೇ ಹಕ್ಕುಬಾಧ್ಯತೆ ಇರುವುದಿಲ್ಲ ಮತ್ತು ಅನಧಿಕೃತ ವಾಸಸ್ಥಳವನ್ನು ಸಕ್ರಮಗೊಳಿಸುವ ಹಕ್ಕು ಹೊಂದಿರುವುದಿಲ್ಲ ಎಂಬುದನ್ನು ಅರಿತಿದ್ದು, ಅದಕ್ಕೆ ನಾನು ಒಪ್ಪಿಕೊಂಡಿದ್ದೇನೆ ಎಂದು ಸಂತ್ರಸ್ತ ಅಫಿಡವಿಟ್ ಮೂಲಕ ಪ್ರಮಾಣ ಪತ್ರ ನೀಡಬೇಕು.

ಒಂದು ವೇಳೆ ಸಂತ್ರಸ್ತ ಅನಧಿಕೃತ ಕಟ್ಟಡ ಹಾಗೂ ವಾಸಸ್ಥಳದಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದಲ್ಲಿ, ಆತ‌ ಭವಿಷ್ಯದಲ್ಲಿ ಸರ್ಕಾರದಿಂದ ಲಭ್ಯವಾಗುವ ಬೇರೆ ಯಾವುದೇ‌ ಪರಿಹಾರ ಮೊತ್ತವನ್ನು ಕ್ಲೈಮ್​ ಮಾಡಲು ಅರ್ಹನಲ್ಲ ಎಂದು ಪ್ರಮಾಣೀಕರಿಸಬೇಕಾಗುತ್ತದೆ.

ಅನಧಿಕೃತ ವಾಸಸ್ಥಳದಲ್ಲಿರುವ ಸಂತ್ರಸ್ತರು ತಮ್ಮ ಹಾನಿಗೊಳಗಾದ‌ ಮನೆಗಳಿಗೆ ಪರಿಹಾರ ಮೊತ್ತ ಪಡೆಯುವಾಗ ನೆರೆ ಪೀಡಿತ ಜಿಲ್ಲೆಗಳ‌ ಡಿಸಿಗಳು ಅವರಿಂದ ಈ ಮೇಲಿನ ನಮೂನೆಯಲ್ಲಿ ಅಫಿಡವಿಟ್ ಪಡೆಯಬೇಕು ಎಂದು ಕಂದಾಯ ಇಲಾಖೆ ಸೂಚನೆ ನೀಡಿದೆ.

ABOUT THE AUTHOR

...view details