ಬೆಂಗಳೂರು:ಎಂಇಎಸ್ ಉದ್ಧಟತನದ ವಿರುದ್ಧ ಮತ್ತು ನಿಷೇಧಕ್ಕೆ ಆಗ್ರಹಿಸಿ ಡಿಸೆಂಬರ್ 31 ರಂದು ಕರೆ ಕೊಟ್ಟಿರುವ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ. ಅಂದು ಬೆಳಗ್ಗೆ 11ಕ್ಕೆ ಟೌನ್ಹಾಲ್ನಿಂದ ಪ್ರತಿಭಟನಾ ಮೆರವಣಿಗೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪುನರುಚ್ಚರಿಸಿದ್ದಾರೆ.
ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಗಾಂಧಿ ಬಜಾರ್ ವೃತ್ತದಲ್ಲಿ 'ಕುರ್ಚಿಗಳ ಸಮ್ಮೇಳನ' ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಇಂದು ಖಾಲಿ ಕುರ್ಚಿಗಳ ಸಮ್ಮೆಳನ ಮಾಡಲಾಗುತ್ತಿದೆ. ಜನರು ಬಂದ್ನಲ್ಲಿ ಭಾಗವಹಿಸಬೇಕು. ಎಂಇಎಸ್ ಸಂಘಟನೆ ನಿಷೇಧಿಸಬೇಕೆಂದು ಬಂದ್ ಮಾಡುತ್ತಿದ್ದೇವೆ. ಅವರನ್ನ ರಾಜ್ಯದಿಂದ ಹೊರಹಾಕಲು ಕನ್ನಡಿಗರು ಒಂದಾಗಬೇಕು. ಕನ್ನಡ ಬಾವುಟ ಹರಿದಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಬಳಿದಿದ್ದಾರೆ. ಇವರನ್ನ ಏನು ಮಾಡಬೇಕು ಹೇಳಿ ಎಂದು ಪ್ರಶ್ನಿಸಿದರು.
ಯಾರು ಏನೇ ಹೇಳಿದ್ರು ಡಿಸೆಂಬರ್ 31 ರಂದು ಬಂದ್ ನಡೆಯುತ್ತದೆ. ಅಂದು ಬಹಳ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಯುತ್ತದೆ. ಟೌನ್ಹಾಲ್ನಿಂದ ಮೆಜೆಸ್ಟಿಕ್ವರೆಗೂ ಮೆರವಣಿಗೆ ನಡೆಸುತ್ತೇವೆ. ಶಾಂತಿ ರೀತಿಯಲ್ಲಿ ಪ್ರತಿಭಟನೆಯನ್ನು ಮಾಡಿ ಬಂದ್ ಯಶಸ್ವಿಯಾಗುವಂತೆ ಮಾಡುತ್ತೇವೆ. ಬೆಳಗಾವಿ ಒಂದೇ ಅಲ್ಲ, ಇಡೀ ಕರ್ನಾಟಕವೇ ಈ ಬಂದ್ಗೆ ಬೆಂಬಲ ನೀಡಬೇಕು ಎಂದರು.