ಬೆಂಗಳೂರು: ಅತಿವೃಷ್ಠಿ, ಅನಾವೃಷ್ಟಿ ಹಾಗೂ ಕೊರೊನಾ ಸಂಕಷ್ಟದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರು 2021-22ನೇ ಸಾಲಿನ ಬಜೆಟ್‍ನಲ್ಲಿ ಯಾವುದೇ ಹೊಸ ತೆರಿಗೆ ವಿಧಿಸದೇ ಅಭಿವೃದ್ಧಿಗೆ ಪೂರಕವಾದ, ಸಾಮಾಜಿಕ ನ್ಯಾಯದೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದ ಬಜೆಟ್ ಇದಾಗಿದ್ದು, ಮುಕ್ತಕಂಠದಿಂದ ಸ್ವಾಗತಿಸುವುದಾಗಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.
ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ವಲಯಕ್ಕೆ 62,000 ಕೋಟಿ ರೂ. ನೀಡಿರುವುದು ಅತ್ಯುತ್ತಮ ಬೆಳವಣಿಗೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ 5,600 ಕೋಟಿ ರೂ. ನೀಡಿದ್ದಲ್ಲದೇ, ರಾಷ್ಟ್ರೀಯ ಯೋಜನೆಯಾಗಿ ಮಾನ್ಯತೆ ಪಡೆಯಲು ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಮಾನ್ಯ ಮಾಡುವಂತೆ ಒತ್ತಡ ಹಾಕಿ, ಸಮನ್ವಯತೆಯನ್ನು ಸಾಧಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಸಮಗ್ರ ಗೋ ಸಂಕುಲ ಅಭಿವೃದ್ಧಿ: ಸಚಿವ ಪ್ರಭು ಚವ್ಹಾಣ್ ಹರ್ಷ
ಹೈನುಗಾರಿಕೆಯನ್ನು ಉತ್ತೇಜಿಸಲು ಹೊರ ರಾಜ್ಯಗಳ ವಿವಿಧ ದೇಸಿ ತಳಿಗಳನ್ನು ರಾಜ್ಯದ ರೈತರಿಗೆ ಪರಿಚಯಿಸಲು "ಸಮಗ್ರ ಗೋ ಸಂಕುಲ ಅಭಿವೃದ್ಧಿ" ಪರಿಚಯಿಸಿದ್ದು ರಾಜ್ಯದ ಹೈನೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್ ಸಂಕಷ್ಟದಲ್ಲೂ ಅತ್ಯಂತ ಸಮತೋಲಿತ ಹಾಗೂ ರೈತಪರ ಮತ್ತು ಪಶುಪಾಲಕರಿಗೆ ಉತ್ತೇಜನ ನೀಡುವ ಬಜೆಟ್ ಮಂಡನೆ ಮಾಡಿದ್ದಾರೆ. ಪಶುಸಂಗೋಪನೆ ಇಲಾಖೆ ಪ್ರತಿ ವರ್ಷ "ಪಶುಮೇಳ" ಹಮ್ಮಿಕೊಳ್ಳುತ್ತಿತ್ತು. ರಾಜ್ಯದಲ್ಲಿನ ವಿಶೇಷ ತಳಿಗಳ ಪ್ರಾತ್ಯಕ್ಷಿಕೆ ಆ ಮೇಳದಲ್ಲಿ ನೋಡಬಹುದಾಗಿತ್ತು. ಆದರೆ ಸುತ್ತಮುತ್ತಲಿನ ತಾಲೂಕು ಮತ್ತು ಆ ಜಿಲ್ಲೆಗೆ ಮಾತ್ರ ಅದು ಸೀಮಿತವಾಗಿರುತ್ತಿತ್ತು. ಸದ್ಯ ಬೆಂಗಳೂರಿನ ಹೆಸರಘಟ್ಟದಲ್ಲಿ "ಥೀಮ್ ಪಾರ್ಕ್" 100 ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದ್ದು ಎಲ್ಲ ಜಾನುವಾರುಗಳ ಪ್ರಾತ್ಯಕ್ಷಿಕೆಗೆ ಇಲ್ಲಿ ವೇದಿಕೆ ದೊರೆಯಲಿದೆ. ಮುಂದಿನ ದಿನಗಳಲ್ಲಿ "ಥೀಮ್ ಪಾರ್ಕ್" ಬೆಂಗಳೂರಿನ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾಗಲಿದೆ ಎಂದು ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.
ಸಿಎಂ ಸಮತೋಲಿತ ಆಯವ್ಯಯ ಮಂಡಿಸಿದ್ದಾರೆ : ಸುರೇಶ್ ಕುಮಾರ್
ಮುಖ್ಯಮಂತ್ರಿಯವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮತೋಲಿತ ಆಯವ್ಯಯ ಮಂಡಿಸಿದ್ದಾರೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯದ 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಅಭ್ಯಸಿಸಿದ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲುದ್ದೇಶಿಸಿರುವ ನಿರ್ಧಾರವು ಸಾಂಕೇತಿಕವಾಗಿದೆಯಾದರೂ ಇತಿಹಾಸವನ್ನು ಸ್ಮರಿಸುವ ಮಹತ್ವಪೂರ್ಣ ವಿಷಯವಾಗಿದ್ದು, ನಮ್ಮ ವಿದ್ಯಾರ್ಥಿಗಳನ್ನು ಗೌರವಿಸುವ ಸಂಗತಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.