ಬೆಂಗಳೂರು: ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ನಗರದಾದ್ಯಂತ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಮಹಿಳೆಯರು ಮಹಾಲಕ್ಷ್ಮಿಯ ಪೂಜೆಗೆ ಸಂಭ್ರಮದಿಂದ ಸಜ್ಜುಗೊಳ್ಳುತ್ತಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹೂವು, ಹಣ್ಣಿನ ವ್ಯಾಪಾರ ಗರಿಗೆದರಿದೆ.
ಕೊರೊನಾ ಭೀತಿಯಿಂದಾಗಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ತುಸು ಕಡಿಮೆಯಾಗಿತ್ತು. ಈ ವರ್ಷ ಹಬ್ಬವನ್ನು ಸರಳವಾಗಿ ಆಚರಿಸಲು ಜನರು ನಿರ್ಧರಿಸಿದ್ದಾರೆ. ಆದರೆ, ಹೂವು-ಹಣ್ಣು ಮಳಿಗೆಗಳಲ್ಲಿ, ಲಕ್ಷ್ಮಿ ಕಳಸಗಳ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿದ್ದು, ಗ್ರಾಹಕನ ಕಿಸೆಗೆ ಕತ್ತರಿ ಬೀಳುವ ಸಾಧ್ಯತೆ ಇದೆ.
ಹಬ್ಬ ಶುಕ್ರವಾರ ಇರುವುದರಿಂದ ನಾಳೆ ಹೆಚ್ಚಿನ ಗ್ರಾಹಕರು ಬರುವ ನಿರೀಕ್ಷೆ ಇದೆ. ಆದರೆ, ಹಬ್ಬದ ವಾತಾವರಣ ಮೊದಲಿನಂತಿಲ್ಲ. ಭಯದ ವಾತಾವರಣ ಸೃಷ್ಟಿಯಾಗಿದೆ. ಅದಕ್ಕಾಗಿ ಗ್ರಾಹಕರ ಸಂಖ್ಯೆ ವಿರಳವಾಗಿದೆ ಎಂದು ಗ್ರಂಥಿಕೆ ಅಂಗಡಿಯ ನವೀನ್ ತಿಳಿಸಿದರು.