ಬೆಂಗಳೂರು :ಬೆಂಗಳೂರಿನಲ್ಲಿರುವ ಯುವಿಇಸಿ ಕಾಲೇಜನ್ನು 'ಯೂನಿವರ್ಸಿಟಿ ಆಫ್ ಎಮಿನೆನ್ಸ್' ಮಟ್ಟಕ್ಕೆ ಉನ್ನತೀಕರಿಸಲಾಗುತ್ತಿದೆ. ಇದು ವಾಜಪೇಯಿಯವರು ಕಂಡಂತಹ ಕನಸಿಗೆ ಪೂರಕವಾಗಿದೆ. ಹಾಗೆಯೇ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದಾದರೂ ವಿಶ್ವವಿದ್ಯಾಲಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಮೂಲಕ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯುವುದೇ ಉತ್ತಮ ಆಡಳಿತದ ಲಕ್ಷಣ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ವಾಜಪೇಯಿಯವರ 97ನೇ ಜನ್ಮದಿನದ ಅಂಗವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಜೊತೆಗೂಡಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ 'ಉತ್ತಮ ಆಡಳಿತ ದಿವಸ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿಯವರ ಆಶಯದಂತೆ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ.
ಉನ್ನತ ಶಿಕ್ಷಣವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುವಂತೆ ಮಾಡಲಾಗಿದೆ. ಇನ್ನೊಂದೆಡೆ, ಇದೇ ತಂತ್ರಜ್ಞಾನ ಬಳಸಿಕೊಂಡು ಕೌಶಲ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಅತ್ಯುತ್ತಮ ಸಂಸ್ಥೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಮುಂದುವರಿದ ದೇಶಗಳಲ್ಲೂ ಆಗಿಲ್ಲ. ವಿಶಿಷ್ಟ ಗುರುತಿನ ಪ್ರಾಧಿಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಖಾತೆಗಳಿಗೆ ನೇರವಾಗಿ ಅನುಕೂಲಗಳನ್ನು ತಲುಪಿಸುತ್ತಿದೆ. ಬ್ಯಾಂಕ್ ಖಾತೆ ತೆಗೆಯುವುದರಿಂದ ಹಿಡಿದು ಅಡುಗೆ ಅನಿಲ ಪೂರೈಕೆವರೆಗೆ ಇವತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಉತ್ತಮ ಆಡಳಿತ’ದ ಹೆಗ್ಗುರುತು ಎಂದು ಅವರು ಪ್ರತಿಪಾದಿಸಿದರು.
ವಾಜಪೇಯಿಯವರ ಪರಿಕಲ್ಪನೆಗಳಾದ ಗ್ರಾಮ ಸಡಕ್ನಿಂದ ಹಿಡಿದು ನದಿ ಜೋಡಣೆಯವರೆಗೆ ಹತ್ತು ಹಲವು ಸಂಗತಿಗಳು ಇಂದು ದೇಶವನ್ನು ಮುನ್ನಡೆಸುತ್ತಿವೆ. ಮೋದಿ ಕೂಡ ನೂರಾರು ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸಿದ್ದು, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
MES ವಿರುದ್ಧ ಕ್ರಮ :ಬೆಳಗಾವಿ ವಿಚಾರದಲ್ಲಿ ಉದ್ಧಟತನ ತೋರಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳು ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕನ್ನಡಪರ ಸಂಘಟನೆಗಳು ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ಕರೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮನವಿ ಮಾಡಿಕೊಂಡಿದ್ದಾರೆ.