ಬೆಂಗಳೂರು:ನಗರದಲ್ಲಿ ದಾಖಲೆ ಮಟ್ಟದಲ್ಲಿ ಇಂದು ವ್ಯಾಕ್ಸಿನ್ ವಿತರಣೆ ನಡೆಯುವ ಸಾಧ್ಯತೆ ಇದೆ. ಮಧ್ಯಾಹ್ನ 3-30ರವರೆಗೂ 1 ಲಕ್ಷದ 15 ಸಾವಿರ ವ್ಯಾಕ್ಸಿನ್ ಡೋಸ್ ವಿತರಣೆಯಾಗಿದೆ. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊರತುಪಡಿಸಿ ಇತರೆಡೆಯೂ ಕ್ಯಾಂಪ್ ಹಾಕಿ (ಮೊಬೈಲ್ ಸೆಂಟರ್ ಗಳ ಮೂಲಕ) ಸಾರ್ವಜನಿಕರಿಗೆ ಇದೇ ಮೊದಲು ಲಸಿಕೆ ನೀಡಲು ಬಿಬಿಎಂಪಿ ಮುಂದಾಗಿದೆ.
ಇಂದಿನಿಂದ ಮೂರು ದಿನಗಳ ಕಾಲ ಈ ಲಸಿಕಾ ಮೇಳ ನಡೆಯಲಿದ್ದು, ಇಂದು 1,30,500 ಕೋವಿಡ್ ವಿರುದ್ಧದ ಲಸಿಕೆ ಡೋಸ್ ವಿತರಣೆಯಾಗಿದೆ. ಒಟ್ಟು 269 ಸ್ಥಳಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕಾ ಮೇಳಕ್ಕೆ ನಗರದಲ್ಲಿ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಆಸ್ಪತ್ರೆಗಳ ಮುಂದೆ, ಲಸಿಕಾ ಕ್ಯಾಂಪ್ಗಳ ಮುಂದೆ ಜನರು ಸರತಿ ಸಾಲಿನಲ್ಲಿ ನಿಂತು ವ್ಯಾಕ್ಸಿನ್ಗಾಗಿ ಮೊರೆ ಹೋಗಿದ್ದಾರೆ. ಹಲವೆಡೆ ಜನ ಬಂದಿದ್ದರೂ, ವ್ಯಾಕ್ಸಿನ್ ಸಾಲಲಿಲ್ಲ. ಇದರಿಂದ ಸಿಬ್ಬಂದಿ, ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ಬೆಳಗ್ಗೆ ಎಂಟರಿಂದಲೇ ವ್ಯಾಕ್ಸಿನ್ ಹಂಚಿಕೆ ಬಗ್ಗೆ ಬಿಬಿಎಂಪಿ ಘೋಷಣೆ ಮಾಡಿದ್ದರೂ, ತಡವಾಗಿ ಆರಂಭಿಸಲಾಯಿತು.
141 ಪ್ರಾಥಮಿಕ ಆರೋಗ್ಯ ಕೇಂದ್ರ, ಸೂಪರ್ ಮಾರ್ಕೆಟ್, ಮಾರುಕಟ್ಟೆ , ಜನನಿಬಿಡ ಪ್ರದೇಶ , ಫುಟ್ಪಾತ್ ಮೇಲೆ, ಕೈಗಾರಿಕೆ, ಫ್ಯಾಕ್ಟರಿಗಳ ಬಳಿ ಲಸಿಕಾ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಕ್ಯಾಂಪ್ನಲ್ಲಿ ಕನಿಷ್ಟ 170 ಜನರಿಗೆ ಲಸಿಕೆ ನೀಡಬೇಕು. ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೂ ಲಸಿಕಾ ಅಭಿಯಾನ ನಡೆಸಲು ಪಾಲಿಕೆ ನಿರ್ಧರಿಸಿದೆ.