ಬೆಂಗಳೂರು:ಯಾವುದೇ ಭಾವನಾತ್ಮಕ ಸಂಬಂಧವಿಲ್ಲದೇ ಪತ್ನಿಯನ್ನು "ಹಣ ನೀಡುವ ಹಸು ಅಥವಾ ಎಟಿಎಂ"ನಂತೆ ನಡೆಸಿಕೊಳ್ಳುವುದು ಮಾನಸಿಕ ಕಿರುಕುಳಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಲ್ಲದೇ, ಪ್ರಕರಣದಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿ ಮಹಿಳೆಗೆ ಗಂಡನಿಂದ ವಿಚ್ಛೇದನ ನೀಡಿದೆ.
ಪತಿಯಿಂದ ವಿಚ್ಛೇದನ ನೀಡದ ಕೌಟುಂಬಿಕ ಕೋರ್ಟ್ ಆದೇಶದ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ಪತಿ ಮಹಿಳೆಯೊಂದಿಗೆ ಯಾವುದೇ ಭಾವನಾತ್ಮಕ ಬಾಂಧವ್ಯವನ್ನು ಹೊಂದಿಲ್ಲ. ಕೇವಲ ಯಾಂತ್ರಿಕವಾಗಿ ಪತಿಯ ಪಾತ್ರವನ್ನು ಪೋಷಿಸಿದ್ದಾರೆ. ವ್ಯಾಪಾರ ನಡೆಸುವ ನೆಪದಲ್ಲಿ ಪತ್ನಿಯಿಂದ 60 ಲಕ್ಷ ರೂಪಾಯಿ ಹಣವನ್ನು ಪತಿ ಪಡೆದುಕೊಂಡಿದ್ದಾರೆ. ಆಕೆಯನ್ನು ಆತ ಕೇವಲ ಹಣ ನೀಡುವ ಎಟಿಎಂ ಆಗಿ ಬಳಸಿಕೊಂಡಿದ್ದಾರೆ. ಗಂಡನ ಈ ವರ್ತನೆಯಿಂದ ಹೆಂಡತಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಇದು ಮಾನಸಿಕ ಕಿರುಕುಳಕ್ಕೆ ಸಮವಾಗುತ್ತದೆ ಎಂದು ಕೋರ್ಟ್ ಹೇಳಿದೆ.
ಈ ಪ್ರಕರಣದಲ್ಲಿ ಪತಿಯಿಂದ ಪತ್ನಿಗೆ ಆಗಿರುವ ನೋವು, ಮಾನಸಿಕ ಕಿರುಕುಳ ಎಂದು ಪರಿಗಣಿಸಬಹುದು. ಕೌಟುಂಬಿಕ ನ್ಯಾಯಾಲಯ ಈ ಎಲ್ಲ ಅಂಶಗಳನ್ನು ಪರಿಗಣಿಸಲು ವಿಫಲವಾಗಿದೆ. ಇದಲ್ಲದೇ, ನ್ಯಾಯಾಲಯವು ಮಹಿಳೆಯನ್ನು ಪೂರ್ಣ ವಿಚಾರಿಸದೇ ಕೇವಲ ಹೇಳಿಕೆಗಳನ್ನು ಮಾತ್ರ ದಾಖಲಿಸಿದೆ ಎಂದಿದೆ.