ಕರ್ನಾಟಕ

karnataka

ETV Bharat / city

ಟ್ವಿಟರ್ ಎಂಡಿಗೆ ನೋಟಿಸ್ ನೀಡಿದ ಕ್ರಮ ಸಮರ್ಥಿಸಿಕೊಂಡ ಯುಪಿ ಪೊಲೀಸರು - Tweeter India

ಅರ್ಜಿದಾರರಿಗೆ ಲೋನಿ ಬಾರ್ಡರ್ ಠಾಣೆ ಪೊಲೀಸರಿಂದ ನಿಜವಾಗಿಯೂ ಬಂಧನ ಭೀತಿ ಇದ್ದಲ್ಲಿ, ಅಲಹಾಬಾದ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಕೋರಬಹುದಿತ್ತು. ಆದರೆ, ಅವರು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ದುರುದ್ದೇಶವನ್ನು ತೋರಿಸುತ್ತದೆ ಎಂದು ಯುಪಿ ಪೊಲೀಸರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

 UP cop defended the about their notice given to twitter MD
UP cop defended the about their notice given to twitter MD

By

Published : Jul 7, 2021, 11:49 PM IST

Updated : Jul 8, 2021, 8:17 AM IST

ಬೆಂಗಳೂರು: ವಿವಾದಿತ ವಿಡಿಯೋ ಪೋಸ್ಟ್ ಕುರಿತಂತೆ ಟ್ವೀಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಅವರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿ ನೋಟಿಸ್ ಜಾರಿಗೊಳಿಸಿರುವ ಕ್ರಮವನ್ನು ಉತ್ತರ ಪ್ರದೇಶ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಗಾಜಿಯಾಬಾದ್​ನ ಲೋನಿ ಬಾರ್ಡರ್ ಠಾಣೆ ಪೊಲೀಸರು ನೀಡಿರುವ ನೋಟಿಸ್ ರದ್ದು ಕೋರಿ ಟ್ವಿಟರ್ ಎಂಡಿ ಮನೀಶ್ ಮಹೇಶ್ವರಿ ಸಲ್ಲಿಸಿರುವ ಅರ್ಜಿಯನ್ನು ಇಂದು ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೊಲೀಸರ ಪರ ವಾದ ಮಂಡಿಸಿದ ವಕೀಲ ಪಿ. ಪ್ರಸನ್ನ ಕುಮಾರ್ ಅವರು, ಘಟನೆ ನಡೆದಿರುವುದು ಉತ್ತರ ಪ್ರದೇಶದ ಲೋನಿ ಬಾರ್ಡರ್ ಠಾಣಾ ವ್ಯಾಪ್ತಿಯಲ್ಲಿ. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು, ಹೇಳಿಕೆ ದಾಖಲಿಸಿಕೊಳ್ಳಲು 2021ರ ಜೂನ್​ 21ರಂದು ಅರ್ಜಿದಾರರಿಗೆ ಸಿಆರ್‌ಪಿಸಿ ಸೆಕ್ಷನ್ 41(ಎ) ಅಡಿ ನೋಟಿಸ್​ನ್ನು ಅರ್ಜಿದಾರರ ನವದೆಹಲಿ ವಿಳಾಸಕ್ಕೆ ಕಳುಹಿಸಿದ್ದಾರೆ.

ಅರ್ಜಿದಾರರಿಗೆ ಲೋನಿ ಬಾರ್ಡರ್ ಠಾಣೆ ಪೊಲೀಸರಿಂದ ನಿಜವಾಗಿಯೂ ಬಂಧನ ಭೀತಿ ಇದ್ದಲ್ಲಿ, ಅಲಹಾಬಾದ್ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಕೋರಬಹುದಿತ್ತು. ಆದರೆ, ಅವರು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ದುರುದ್ದೇಶವನ್ನು ತೋರಿಸುತ್ತದೆ. ಇನ್ನು ಪ್ರಕರಣದ ವಿಚಾರಣಾ ವ್ಯಾಪ್ತಿ ಅಲಹಾಬಾದ್ ಹೈಕೋರ್ಟ್ ಗಿದೆಯೇ ಹೊರತು ಕರ್ನಾಟಕ ಹೈಕೋರ್ಟ್ ಗೆ ಇಲ್ಲ. ಐಟಿ ಕಾಯ್ದೆಯ ಸೆಕ್ಷನ್ 2(ಡಬ್ಲ್ಯೂ) ಪ್ರಕಾರ ಪ್ರಕರಣದಲ್ಲಿ ಮಧ್ಯವರ್ತಿಯಾಗಿರುವ ಟ್ವಿಟ್ಟರ್ ಐಎನ್‌ಸಿ ಮತ್ತು ಟ್ವಿಟ್ಟರ್ ಇಂಡಿಯಾ ಸಂಸ್ಥೆಗಳ ವಿರುದ್ಧ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು -2021ರ ಅಡಿ ಪ್ರಾಸಿಕ್ಯೂಷನ್‌ ಗೆ ಒಳಪಡಿಸಬಹುದು. ಆದ್ದರಿಂದ ಅರ್ಜಿದಾರರ ಮನವಿ ವಜಾಗೊಳಿಸಬೇಕು ಎಂದು ಕೋರಿದರು.

ಇದೇ ವೇಳೆ, ಯುಪಿ ಪೊಲೀಸರ ಲಿಖಿತ ಹೇಳಿಕೆಗೆ ಆಕ್ಷೇಪಿಸಿ ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಅರ್ಧ ತಾಸಿಗೂ ಹೆಚ್ಚು ಸಮಯ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ವಿಚಾರಣೆ ಮುಂದೂಡಿತು. ಇದೇ ವೇಳೆ ನ್ಯಾಯಾಲಯದ ಕಲಾಪವನ್ನು ಸೂಕ್ತ ರೀತಿಯಲ್ಲಿ ವರದಿ ಮಾಡದ ಮಾಧ್ಯಮಗಳ ಕುರಿತೂ ಬೇಸರ ವ್ಯಕ್ತಪಡಿಸಿತು. ಕೋರ್ಟ್ ಕೊಠಡಿ ಕುಸ್ತಿ ಅಖಾಡವಲ್ಲ. ಹೀಗಾಗಿ ವರದಿ ಮಾಡುವ ವೇಳೆ ಎಚ್ಚರಿಕೆಯಿಂದ ಪದ ಬಳಕೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿತು.

Last Updated : Jul 8, 2021, 8:17 AM IST

ABOUT THE AUTHOR

...view details