ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನಡೆಸಿದರು. ಈ ಐತಿಹಾಸಕ ಕ್ಷಣದಲ್ಲಿ ಭಾಗಿಯಾದ ಪ್ರಧಾನಿ ಮೋದಿಯವರಿಗೆ ಕನ್ನಡ ನೆಲದಲ್ಲಿ ಅರಳಿ ನಿಂತ ತೇಗದ ಮರದಿಂದ ಕೆತ್ತಲ್ಪಟ್ಟ ಕೋದಂಡರಾಮನ ಮೂರ್ತಿ ಉಡುಗೊರೆಯಾಗಿ ನೀಡಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ಶ್ರೀರಾಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗಣ್ಯರಿಗೆ ಉತ್ಕೃಷ್ಟ ಕೆತ್ತನೆಯುಳ್ಳ ಕಲಾ ಕುಸುರಿಯನ್ನು ಹೊಂದಿದ ವಿಗ್ರಹಗಳನ್ನು ನೀಡಿ ಗೌರವಿಸಲಾಯಿತು. ಅದರಲ್ಲಿ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಕೋದಂಡರಾಮ ವಿಗ್ರಹ ಕನ್ನಡ ನಾಡಿನ ಕೊಡುಗೆ ಎಂಬುದು ಗಮನಾರ್ಹ ವಿಚಾರ.
ಕನ್ನಡ ಶಿಲ್ಪಿ ಕೈಯಲ್ಲಿ ಅರಳಿದ ಪ್ರತಿಮೆ:
ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ರಾಮಮೂರ್ತಿ ಎನ್ನುವ ಶಿಲ್ಪಿ ಇತಿಹಾಸ ಪ್ರಸಿದ್ಧ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಗಣ್ಯರಿಗೆ ಉಡುಗೊರೆ ನೀಡುವ ಪ್ರತಿಮೆ ಕೆತ್ತಿದ್ದಾರೆ. ಪ್ರಧಾನಿ ಮೋದಿ ಸ್ವೀಕರಿಸಿದ ಕೋದಂಡರಾಮ ಪ್ರತಿಮೆ ರಾಮಮೂರ್ತಿ ಕೈಯಲ್ಲಿಯೇ ಅರಳಿದ್ದಾಗಿದೆ. ರಾಮ, ಲವ-ಕುಶ ಮೂರು ಬಗೆಯ ಮೂರ್ತಿಗಳನ್ನು ಶಿಲಾನ್ಯಾಸ ಸಮಾರಂಭಕ್ಕಾಗಿಯೇ ಕೆತ್ತಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಕೋರಿಕೆ ಮೇರೆಗೆ ಶಿಲ್ಪಿ ರಾಮಮೂರ್ತಿ ತೇಗದ ಮರದಿಂದ ಮೂರು ಅಡಿ ಎತ್ತರದ ಕೋದಂಡರಾಮನ ಪ್ರತಿಮೆ ಒಂದೂವರೆ ಅಡಿ ಎತ್ತರದ ಲವ,ಕುಶ ಮತ್ತು ಒಂದೂವರೆ ಅಡಿ ಎತ್ತರದ ರಾಮನ ಮೂರ್ತಿಗಳನ್ನು ಕೆತ್ತಿದ್ದಾರೆ.
ಎಲ್ಲ ಪ್ರತಿಮೆಗಳನ್ನು ಜುಲೈ 31ರಂದು ಉತ್ತರಪ್ರದೇಶಕ್ಕೆ ಕಳುಹಿಸಿಕೊಟ್ಟಿದ್ದು ಇಂದಿನ ಸಮಾರಂಭದಲ್ಲಿ ಗಣ್ಯರಿಗೆ ವಿಗ್ರಹಗಳನ್ನು ನೀಡಿ ಗೌರವಿಸಲಾಯಿತು.ಈ ಕುರಿತು ಟ್ವೀಟ್ ಮೂಲಕ ಸಂಸದ ಪಿಸಿ ಮೋಹನ್ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದಿಂದ ರವಾನೆಯಾಗಿದ್ದ ಶ್ರೀ ಕೋದಂಡರಾಮನ ಪ್ರತಿಮೆಯನ್ನು ಹಿಂದೂ ಉಡುಗೊರೆಯಾಗಿ ನೀಡಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12.44 ರ ಶುಭ ಅಭಿಜಿನ್ ಲಗ್ನದ ನಕ್ಷತ್ರದ ಮುಹೂರ್ತದಲ್ಲಿ ಪ್ರಧಾನಿ ಮೋದಿ ಭೂಮಿ ಪೂಜೆ ನಡೆಸಿದರು.