ಬೆಂಗಳೂರು: ವಿಧಾನಪರಿಷತ್ನಲ್ಲಿ ಅಶಾಂತಿ ವಾತಾವರಣ ಮುಂದುವರಿದ ಹಿನ್ನೆಲೆ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾಗಿ ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ರಾಜ್ಯಪಾಲರಿಗೆ ನೀಡಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆದ ಘಟನಾವಳಿಗಳ ವಿವರವನ್ನು ರಾಜ್ಯಪಾಲರಿಗೆ ನೀಡಿರುವ ಅವರು, ಪರಿಷತ್ನಲ್ಲಿ ಮಂಗಳವಾರ ಭಯದ ವಾತಾವರಣ ಇತ್ತು. ನಾನು ಪೀಠಕ್ಕೆ ತೆರಳಿದಾಗಲೂ ಸದನದಲ್ಲಿ ಸದಸ್ಯರ ಕೂಗಾಟ - ಜಗ್ಗಾಟ ಮುಂದುವರೆದಿತ್ತು. ಜೊತೆಗೆ ಪೀಠದ ಸುತ್ತಲೂ ಸದಸ್ಯರು ಸುತ್ತುವರೆದು ಭಯದ ವಾತಾವರಣ ನಿರ್ಮಾಣ ಮಾಡಿದ್ದರು. ನಾನು ಪೀಠದಿಂದ ಎಲ್ಲಾ ಸದಸ್ಯರಿಗೆ ಮನವಿ ಮಾಡಿದರೂ ಶಾಂತ ವಾತಾವರಣ ಮೂಡದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿರುವುದಾಗಿ ಹೇಳಿದ್ದಾರೆ.
ಓದಿ-ಜಾತಿ ಹೆಸರಲ್ಲಿ ನಿಗಮ -ಪ್ರಾಧಿಕಾರ ರಚನೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ವಿಧಾನ ಪರಿಷತ್ ಕಲಾಪ ಆರಂಭಿಸಲು ಕಾರ್ಯದರ್ಶಿಗಳ ಸೂಚನೆ ಮೇರೆಗೆ ಬೆಲ್ ಆರಂಭಿಸಲಾಯಿತು. ಆದರೆ, ಇದು ನಿಲ್ಲುವ ಮುನ್ನವೇ ಉಪಸಭಾಪತಿಗಳು ಸಭಾಪತಿ ಪೀಠ ಅಲಂಕರಿಸಿದ್ದರು. ನಾನು ನನ್ನ ಕಚೇರಿಯಲ್ಲಿ ಕುಳಿತಿರುವಾಗ ಎಲ್ಲ ಬೆಳವಣಿಗೆಗಳು ನಡೆದವು. ನಾನು ಕೂಡ ಬೇಕಿದ್ದ ಪೀಠದಲ್ಲಿ ಉಪಸಭಾಪತಿ ಕುಳಿತಿದ್ದರಿಂದ ಗೊಂದಲಕ್ಕೊಳಗಾದ ಸದಸ್ಯರು ಸಭಾಪತಿ ಪೀಠವನ್ನು ಸುತ್ತುವರೆದು, ತಳ್ಳಾಟ, ನೂಕಾಟ ಮಾಡಿದ್ದಾರೆ ಇದರಿಂದ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಒಬ್ಬರಿಗೊಬ್ಬರು ಕಿರುಚಾಡುತ್ತ, ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯುತ್ತಿತ್ತು. ಕೆಲವು ಸದಸ್ಯರು ಪೀಠದ ಮುಂದಿನ ಗ್ಲಾಸ್, ಮೈಕ್‌ಗಳನ್ನು ಧ್ವಂಸಗೊಳಿಸುವ ಜೊತೆಗೆ ಪೀಠದ ಮುಂದೆ ಇದ್ದ, ಎಲ್ಲ ದಾಖಲೆಗಳನ್ನು ಹರಿದು ಹಾಕುತ್ತಿದ್ದರು ಎಂದು ವಿವರಿಸಿದ್ದಾರೆ.