ಬೆಂಗಳೂರು:ಅವಿವಾಹಿತ ಮಹಿಳೆಯನ್ನು ಮೂವರು ಪರಿಚಯಸ್ಥರೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲೇಶ್ವರಂ ನಿವಾಸಿ ಸುನೀತಾ ರಾಮಪ್ರಸಾದ್ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಗೋವಿಂದಪುರ ನಿವಾಸಿಗಳಾದ ಇಮ್ರಾನ್ ಮತ್ತು ವೆಂಕಟೇಶ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಪ್ರಮುಖ ಆರೋಪಿ ಕಿರಣ್ ಎಂಬಾತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಏನಿದು ಘಟನೆ: ಆರೋಪಿಗಳ ಪೈಕಿ ಕಿರಣ್ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದ. ಈತನ ಪತ್ನಿ ಶಿಕ್ಷಕಿಯಾಗಿದ್ದಾರೆ. ವರ್ತೂರಿನ ಕಾಚಮಾರನಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರ ಒಂದನೇ ಮಹಡಿಯಲ್ಲಿ ದಂಪತಿ ವಾಸವಾಗಿದ್ದಾರೆ. ಇಮ್ರಾನ್ ಆಟೋ ಚಾಲಕನಾಗಿದ್ದು, ವೆಂಕಟೇಶ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದನು. ಈ ಹಿಂದೆ ಕಿರಣ್ ಕೂಡ ಗೋವಿಂದಪುರದಲ್ಲಿ ವಾಸವಾಗಿದ್ದರಿಂದ ಮೂವರು ಪರಿಚಯಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳೊಂದಿಗೆ ಮಹಿಳೆ ಪರಿಚಯ: ಸುನೀತಾ ರಾಮ್‌ಪ್ರಸಾದ್ ಅವಿವಾಹಿತರಾಗಿದ್ದು, ಅವರ ಸಹೋದರರು ವಿದೇಶದಲ್ಲಿದ್ದಾರೆ. ಇನ್ನು ಅವರ ತಂದೆ ಮೈಸೂರಿನಲ್ಲಿದ್ದಾರೆ. ಹೀಗಾಗಿ ಮಲ್ಲೇಶ್ವರಂನಲ್ಲಿ ಸಂಬಂಧಿಯೊಬ್ಬರ ಜತೆ ಸುನೀತಾ ವಾಸವಾಗಿದ್ದರು. ಸಣ್ಣಪುಟ್ಟ ಫೈನಾನ್ಸ್ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸುನೀತಾ ತಮ್ಮ ಜೀವನ ಸಾಗಿಸುತ್ತಿದ್ದರು. ಈ ಮಧ್ಯೆ ಕಿರಣ್ ಪರಿಚಯವಾಗಿದೆ. ಅಲ್ಲದೆ ಸುನೀತಾಗೆ ನಡೆಯಲು ಕಷ್ಟವಾಗುತ್ತಿದ್ದರಿಂದ ಎಲ್ಲಿಗಾದರೂ ಹೋಗಬೇಕಾದರೆ ಕಿರಣ್, ಇಮ್ರಾನ್ ಹಾಗೂ ವೆಂಕಟೇಶ್ ಸಹಾಯ ಪಡೆದುಕೊಳ್ಳುತ್ತಿದ್ದರು.
ಓದಿ:ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನ ಬರ್ಬರವಾಗಿ ಕೊಲೆಗೈದ ಗಂಡ!
ಕೊಲೆಗೆ ಸಂಚು:ಸುನೀತಾ ಬಳಿ ಹೆಚ್ಚು ಹಣವಿರಬಹುದು ಎಂದು ಭಾವಿಸಿದ್ದ ಆರೋಪಿಗಳು ಕೊಲೆಗೆ ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆ ಕಿರಣ್ ತಾನು ವಾಸವಾಗಿರುವ ಅಪಾರ್ಟ್‌ಮೆಂಟ್ ಮಾಲೀಕರಿಗೆ ನಾಲ್ಕನೇ ಮಹಡಿಯಲ್ಲಿ ಖಾಲಿ ಇರುವ ಮನೆಗೆ ತಮ್ಮ ಪರಿಚಯಸ್ಥರೊಬ್ಬರು ಬಾಡಿಗೆಗೆ ಬರುತ್ತಾರೆ ಎಂದು ನಾಲ್ಕು ದಿನಗಳ ಹಿಂದೆಯೇ ಕೀ ಪಡೆದುಕೊಂಡಿದ್ದ. ಏ.1ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುನೀತಾರನ್ನು ಮೂವರು ಆರೋಪಿಗಳು ನಾಲ್ಕನೇ ಮಹಡಿಯ ಮನೆಗೆ ಕರೆದೊಯ್ದಿದ್ದಾರೆ.