ಕರ್ನಾಟಕ

karnataka

ಅನ್​​​ಲಾಕ್​ ಪ್ರಕ್ರಿಯೆ ನಂತರವೂ ತಪ್ಪದ ದಿನಸಿ ವಸ್ತುಗಳ ದರ ಏರಿಕೆ ಬಿಸಿ

By

Published : Oct 8, 2020, 2:10 PM IST

ರಾಜ್ಯವನ್ನು ಹಂತ ಹಂತವಾಗಿ ಅನ್​​ಲಾಕ್ ಮಾಡಲಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಲಾಕ್​​ಡೌನ್​​ ನೆಪ ಹೇಳಿ ವ್ಯಾಪಾರಸ್ಥರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಬೇಕಾಬಿಟ್ಟಿ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

Unlock process fails to bring down prices of essential commodities
ದಿನಸಿ ವಸ್ತುಗಳ ದರ ಏರಿಕೆ ಬಿಸಿ

ಬೆಂಗಳೂರು: ಕೊರೊನಾ ವೈರಸ್ ಸಮಾಜದಲ್ಲಿ ಹರಡದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಅನ್ನೇ ಲಾಭ ಮಾಡಿಕೊಂಡ ಕೆಲ ವ್ಯಾಪಾರಸ್ಥರು ಅಗತ್ಯ ವಸ್ತುಗಳ ಬೆಲೆಯನ್ನು ದಿಢೀರ್ ಏರಿಸುವ ಮೂಲಕ ಬಡವರು ಮತ್ತು ಮಧ್ಯಮ ವರ್ಗದ ಮತ್ತಷ್ಟು ಸಂಕಷ್ಟ ತಂದೊಡ್ಡಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ.

ಲಾಕ್​ಡೌನ್ ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಸದ್ಯ ಹಂತ ಹಂತವಾಗಿ ಅನ್​​ಲಾಕ್ ಮಾಡಲಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಲಾಕ್​​ಡೌನ್​​ ನೆಪ ಹೇಳಿ ಸಾಮಾನ್ಯ ಜನರ ರಕ್ತ ಹೀರುವ ರೀತಿ ವ್ಯಾಪಾರಸ್ಥರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಬೇಕಾಬಿಟ್ಟಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಜನರು ಅನ್​ಲಾಕ್​​ ನಂತರ ಇತ್ತ ಕೆಲಸಕ್ಕೂ ಹೋಗಲಾಗದೆ ದುಡಿದು ಕೂಡಿಟ್ಟ ಅಲ್ಪಸ್ವಲ್ಪ ಹಣವನ್ನೆ ನಂಬಿ ಬದುಕುತ್ತಿದ್ದಾರೆ. ಈ ನಡುವೆ ದಿನಸಿ ಖರೀದಿಸಲು ಹೋದರೆ ನಿಗದಿತ ಬೆಲೆಗಿಂತ‌ಲೂ ಹೆಚ್ಚಿನ ದರಕ್ಕೆ ಮಾರಾಟ‌ ಮಾಡಲಾಗುತ್ತಿದೆ. ಇದರಿಂದ‌ ಜೀವನ ನಿರ್ವಹಣೆ ತ್ರಾಸದಾಯಕವಾಗಿದೆ. ಅಕ್ಕಿ, ಬೇಳೆ ಹೀಗೆ ಹಲವು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದರೆ ಖರೀದಿ ಮಾಡುವುದಾದರೂ ಹೇಗೆ ಎಂಬುದು ಬಡ ಜನರ ಪ್ರಶ್ನೆಯಾಗಿದೆ.

ವಿಜಯಪುರದಲ್ಲಿ ಲಾಕ್​​​ಡೌನ್ ತೆರವುಗೊಳಿಸಿ ತಿಂಗಳು ಮೇಲೆಯಾದರೂ ದಿನಸಿ ವಸ್ತುಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಬೆಲೆ ಇಳಿಸಿದರೂ ಜನ ಖರೀದಿಗೆ ಮುಂದಾಗುತ್ತಿಲ್ಲ. ಇದು ವ್ಯಾಪಾರಸ್ಥರಲ್ಲಿ ಆತಂಕ ಹೆಚ್ಚಿದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಲಾಕ್​ಡೌನ್ ಸಂದರ್ಭದಲ್ಲಿ ಹೆಚ್ಚಾಗಿದ್ದ ಅಗತ್ಯ ವಸ್ತುಗಳ ಬೆಲೆ ಅನ್​ಲಾಕ್​ನಲ್ಲಿ ಸಾಮಾನ್ಯ ದರಕ್ಕೆ ಇಳಿದಿದೆ. ಇನ್ನು ಮಂಗಳೂರಿನಲ್ಲಿ ಯಾವುದೇ ರೀತಿ ದಿನಸಿ ವಸ್ತುಗಳ ದರದಲ್ಲಿ ಏರುಪೇರು ಕಂಡಿಲ್ಲ.

ದಿನಸಿ ವಸ್ತುಗಳ ದರ ಏರಿಕೆ ಬಿಸಿ

ಅಂಗಡಿ ಮಾಲೀಕರು ಆಹಾರ ಹಾಗೂ ದಿನಸಿ ಪದಾರ್ಥಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೂ ಯಾವೊಬ್ಬ ಅಂಗಡಿಯವರೂ ಕ್ಯಾರೆ ಎನ್ನುತ್ತಿಲ್ಲ ಎನ್ನಲಾಗಿದೆ. ಅವರೇನೂ ಆಫೀಸಿನಲ್ಲಿ ಕೂತು ಆದೇಶ ಮಾಡುತ್ತಾರೆ. ಸಗಟು ಮಾರಾಟಗಾರರು ದಾಸ್ತಾನು ಸರಬರಾಜು ವ್ಯತ್ಯಯದ ಕಾರಣ ನೀಡಿ ನಮಗೆ ಹೆಚ್ಚಿನ‌ ದರ ವಿಧಿಸುತ್ತಾರೆ ನಾವೇನು‌ ಮಾಡಲಾಗದು. ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ‌ ಮಾಡುವುದು ಅನಿವಾರ್ಯ ಎನ್ನುತ್ತಾರೆ ಹಲವು ವ್ಯಾಪಾರಿಗಳು. ಈ ಕುರಿತು ಆಯಾ ಜಿಲ್ಲೆಯ ಅಧಿಕಾರಿಗಳು ಸಗಟು ಮಾರಾಟಗಾರರ ಸಭೆ ಕರೆದು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ‌ ಮಾಡದಂತೆ ಕಠಿಣ ಸಂದೇಶ ನೀಡಬೇಕಿದೆ.

ABOUT THE AUTHOR

...view details