ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ಶಾಲಾ-ಕಾಲೇಜುಗಳಿಗೆ ಇದರಿಂದ ಬಿಡುವು ಸಿಕ್ಕಿಲ್ಲ. ಒಂದೆಡೆ ಸರ್ಕಾರ ಭೌತಿಕ ತರಗತಿ ಆರಂಭಕ್ಕೆ ಲೆಕ್ಕಾಚಾರ ಹಾಕ್ತಿದ್ರೆ, ಮತ್ತೊಂದು ಕಡೆ ರಾಜ್ಯದಲ್ಲಿ ಕೊರೊನಾಗಿಂತ ಮಾರಕವಾಗಿರುವ ಸಾಮಾಜಿಕ ರೋಗ ಸೃಷ್ಟಿಯಾಗುವ ಭೀತಿ ಶುರುವಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು ಭಾಗಗಳಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳು ಆರಂಭವಾಗದೇ ಮಕ್ಕಳು ಬಾಲಕಾರ್ಮಿಕ ಪದ್ಧತಿಗೆ ಒಳಗಾಗುತ್ತಿದ್ದಾರೆ. ಈ ಕುರಿತು ಶಿಕ್ಷಣ ತಜ್ಞರು, ಶಿಕ್ಷಣ ಸಂಘಟನೆಗಳ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಶಾಲಾ ತರಗತಿಗಳು ಈಗಲೂ ಆರಂಭವಾಗದೇ ಹೋದರೆ ಸಾಮಾಜಿಕ ರೋಗ ಶುರುವಾಗುತ್ತದೆ. ಆರು ತಿಂಗಳೊಳಗಾಗಿ ಮಕ್ಕಳು ಶಾಲೆಯ ಮುಖ ನೋಡದಿದ್ದರೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮಾರುಕಟ್ಟೆ, ಬಾಲ್ಯವಿವಾಹ ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಾಗಿ ಇರುವುದರಿಂದ ಇದಕ್ಕೆ ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸಾಮಾಜಿಕ ರೋಗದ ಮಾಹಿತಿ ನೀಡಿದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸುನಿಲ್ ಹುಡುಗಿ ಈ ಕುರಿತು ಮಾಹಿತಿ ನೀಡಿರುವ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸುನಿಲ್ ಹುಡುಗಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಬಾಲ ಕಾರ್ಮಿಕ ಪದ್ಧತಿ ಇದ್ದು, ಈ ಎರಡು ವರ್ಷ ಶಾಲೆ ಇಲ್ಲದೇ ಇರುವುದರಿಂದ ಮಕ್ಕಳು ಬಾಲ ಕಾರ್ಮಿಕರಾಗಿ ಪರಿವರ್ತನೆಗೊಳ್ತಿದ್ದಾರೆ. ಅಲ್ಲಿನ ಪೋಷಕರಿಗೆ ಒಂದು ವೇಳೆ ಈ ದುಡಿಮೆಯೇ ಚಟವಾಗಿ ಬಿಟ್ಟರೆ, ಯಾವ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಅವರ ಭವಿಷ್ಯ ಬೀದಿಪಾಲಾಗಿ ಬಿಡುತ್ತದೆ. ಕೊರೊನಾ ದೈಹಿಕ ರೋಗವಾದ್ರೆ ಶಿಕ್ಷಣ ಇಲ್ಲದಿರುವುದು ಸಾಮಾಜಿಕ ರೋಗವಾಗುತ್ತದೆ ಅಂತ ಎಚ್ಚರಿಕೆ ನೀಡಿದರು.
ಎರಡು ದಶಕದ ಕಷ್ಟ ನೀರಿನಲ್ಲಿ ಹೋಮ:ಬಾಲಕಾರ್ಮಿಕ ಪದ್ಧತಿ ತಡೆಗೆ ಎರಡೂ ದಶಕಕ್ಕೂ ಹೆಚ್ಚು ಸಮಯ ಕಷ್ಟಪಟ್ಟಿದ್ದು ನೀರಲ್ಲಿ ಹೋಮ ಮಾಡಿದಂತಾಗುತ್ತದೆ. ಭೌತಿಕ ತರಗತಿ ಶುರುವಾಗದಿದ್ದರೆ ಮತ್ತೆ 20 ವರ್ಷಗಳ ಹಿಂದಕ್ಕೆ ಆ ಜಿಲ್ಲೆಗಳು ಹೋಗಲಿದ್ದು ಇದರಿಂದ ಬಾಲ ಕಾರ್ಮಿಕರು, ಭಿಕ್ಷಾಟನೆ, ಬಾಲ್ಯದಲ್ಲೇ ಮದುವೆ ಮಾಡುವುದೆಲ್ಲಾ ಹೆಚ್ಚಾಗಲಿದೆ. ಬಾಲ ಕಾರ್ಮಿಕ ಪದ್ಧತಿಗೆ ಯಾರು ಸ್ವ ಇಚ್ಛೆಯಿಂದ ಹೋಗುವುದಿಲ್ಲ, ಪಾಲಕರ ಪ್ರಚೋದನೆ ಇರುತ್ತದೆ. ಪಾಲಕರ ಪ್ರಚೋದನೆಗೆ ಕಾರಣ ಬಡತನ. ಮಕ್ಕಳಿಂದಲ್ಲೂ ದಿನದ ಖರ್ಚು ಬರುತ್ತೆ ಅನ್ನೋ ಕಾರಣಕ್ಕೆ ಶಾಲೆಗೆ ಕಳುಹಿಸದೇ ಇರುವ ಪರಿಸ್ಥಿತಿ ನಿರ್ಮಾಣವಾದರೆ ಬಹಳ ಕಷ್ಟವಾಗುತ್ತದೆ ಎಂದರು.
ಶಾಲೆ ಆರಂಭವಾದ್ರೆ ಇದೆಲ್ಲವೂ ನಿಯಂತ್ರಣಕ್ಕೆ ಬರಲಿದೆ. ಮಕ್ಕಳಿಗೆ ಬಿಸಿಯೂಟ, ಹಾಲು, ಪಠ್ಯಪುಸ್ತಕ, ಅಕ್ಷರ ಜ್ಞಾನ ಇವೆಲ್ಲವೂ ಸಿಕ್ಕಾಗ ಈ ಪದ್ಧತಿಯಿಂದ ದೂರ ಉಳಿಯಬಹುದು. ಅಂದಾಜು ಕಲ್ಯಾಣ ಕರ್ನಾಟಕ ಭಾಗದಲ್ಲಿ 35 ಲಕ್ಷ ಮಕ್ಕಳಿದ್ದು ಇದರಲ್ಲಿ ಗ್ರಾಮೀಣ ಭಾಗದಲ್ಲೇ 18 ಲಕ್ಷ ಮಕ್ಕಳಿದ್ದು,ಇವರೇ ಟಾರ್ಗೆಟ್ ಆಗ್ತಾರೆ ಎಂದು ಸುನಿಲ್ ಹುಡುಗಿ ತಿಳಿಸಿದರು.
ಭೌತಿಕ ತರಗತಿ ಆರಂಭಕ್ಕೆ ಕಾರ್ಯಪಡೆ ರಚನೆ: ಇನ್ನು ರಾಜ್ಯದಲ್ಲಿ ಭೌತಿಕ ತರಗತಿ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ಇದರಲ್ಲಿ ಶಿಕ್ಷಣ ತಜ್ಞರು, ಪೋಷಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲರನ್ನೂ ಒಳಗೊಂಡಿದ್ದು ಇನ್ನು 8-10 ದಿನದೊಳಗೆ ವರದಿ ಸಲ್ಲಿಸಲ್ಲಿದ್ದಾರೆ. ಭೌತಿಕ ತರಗತಿ ಯಾವಾಗ?, ಹೇಗೆ? ನಡೆಸಬೇಕು. ವಿದ್ಯಾಗಮ ಯೋಜನೆ ಕುರಿತು ವರದಿಯಲ್ಲಿ ಉಲ್ಲೇಖ ಮಾಡಲಿದ್ದಾರೆ.