ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಪತ್ನಿ ಡಾಟಿ ಅವರೊಂದಿಗೆ ಮಲ್ಲೇಶ್ವರಂ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಕೋವಿಡ್19 ಲಸಿಕೆ ಪಡೆದರು.
ಲಸಿಕೆ ಪಡೆದ ನಂತರ ಮಾತನಾಡಿದ ಅವರು ಕೋವಿಡ್ ಸಾಂಕ್ರಾಮಿಕವನ್ನು ಎದುರಿಸಲು ಬಡ ರಾಷ್ಟ್ರಗಳಿಗೂ ಕೋವಿಡ್ ಲಸಿಕೆಯನ್ನು ಸರಬರಾಜು ಮಾಡಲಾಗುತ್ತಿದೆ. ಸೀನಿಯರ್ ಸಿಟಿಜನ್ ಆದ ಕಾರಣ ಇಂದು ನಾನು ಕೂಡ ಲಸಿಕೆ ಪಡೆದಿದ್ದು, ಸೂಜಿ ಚುಚ್ಚಿದ್ದು ಗೊತ್ತಾಗಲೇ ಇಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯೆ ಸ್ವಲ್ಪ ಮಟ್ಟಿಗೆ ಮುಜುಗರವೂ ಹೌದು:
ಸಿಡಿ ಪ್ರಕರಣವನ್ನು ಬಿಜೆಪಿ ಹೈಕಮಾಂಡ್ ಗಮನಿಸಿದ ಕಾರಣ ಕೂಡಲೇ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯುವ ಕೆಲಸವಾಗಿದೆ. ರಾಜಕೀಯ ದೊಂಬರಾಟದಲ್ಲಿ ಸಿಡಿಗಳು ತನ್ನದೇ ಪ್ರಭಾವ ಬೀರುವುದನ್ನು ನೋಡುತ್ತಿದ್ದೇವೆ. ಸ್ವಲ್ಪ ಮಟ್ಟಿಗೆ ಮುಜುಗರ ಹೌದು, ಇಲ್ಲಾ ಅಂತಾ ಹೇಳುತ್ತಿಲ್ಲ. ಟೆಕ್ನಾಲಜಿ ಎಷ್ಟು ಮುಂದುವರಿದಿದೆ ಅಂದ್ರೆ, ಏನೂ ಬೇಕಾದರೂ ಮ್ಯಾನಿಪುಲೇಟ್ ಮಾಡಬಹುದು. ಹಾಗಂತ ಆಗಿದ್ದೆಲ್ಲವೂ ಮ್ಯಾನಿಪುಲೇಟ್ ಅಂತಾ ಹೇಳುತ್ತಿಲ್ಲ. ತನಿಖೆ ನಡೆಸಲಾಗುತ್ತಿದೆ. ನೈತಿಕತೆಗೆ ಪ್ರಾಮುಖ್ಯತೆ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ನೈತಿಕತೆಗೆ ತೊಂದರೆ ಬಂದಾಗ ಸಾಮಾಜಿಕ ವ್ಯವಸ್ಥೆ ಕೂಡ ಅಂಚಿಗೆ ಹೋಗುತ್ತದೆ. ಆಡಳಿತಕ್ಕೂ ಇದು ತೊಂದರೆ ಆಗುತ್ತದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರು.
ಜಾರಕಿಹೊಳಿ ವಿಚಾರ ಕುರಿತು ಕೇಂದ್ರದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ನಮ್ಮಲ್ಲಿ ಮಾಹಿತಿ ಕೇಳಿದ್ದರು. ಮಾಧ್ಯಮ ವರದಿ ಆಧಾರಿತವಾಗಿ ನಾವು ವರದಿ ಕೊಟ್ಟಿದ್ದೇವೆ. ಸ್ವಾಭಾವಿಕವಾಗಿ ಇಂತಹ ಆರೋಪ ಬಂದಾಗ ತನಿಖೆಗೆ ಸಚಿವರು ಸಹಕಾರ ನೀಡಬೇಕು ಎಂದರು.
ಇತರೆ ಸಚಿವರು ಕೋರ್ಟ್ ಮೆಟ್ಟಿಲೇರಿರುವ ಸಂಬಂಧ ಪ್ರತಿಕ್ರಿಯಿಸಿದ ಸದಾನಂದ ಗೌಡರು, ವೈಯಕ್ತಿಕವಾಗಿ ಅವರ ಭಾವನೆಗಳನ್ನು ಕೋರ್ಟ್ನಲ್ಲಿ ವ್ಯಕ್ತಪಡಿಸಬಾರದು ಅಂತಾ ನಾವು ಮಧ್ಯಪ್ರವೇಶ ಮಾಡಲು ಆಗಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ಕೂಡ ತನ್ನ ಭವಿಷ್ಯದ ಯೋಚನೆ ಇರುತ್ತದೆ, ಅದನ್ನು ನೋಡಿಕೊಂಡು ಅವರು ಹೆಜ್ಜೆ ಇಡುತ್ತಾರೆ. ಅದು ಅವರವರಿಗೆ ಬಿಟ್ಟಿದ್ದು, ಆದರೆ ಅನಾವಶ್ಯಕವಾಗಿ ಕೋರ್ಟ್ಗೆ ಹೋಗುವುದು ಒಳ್ಳೆಯದಲ್ಲ ಅಂತ ತಿಳಿಸಿದರು.
ಸ್ಮಗ್ಲಿಂಗ್ ಕೇಸ್ನಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಕೇಳಿಬಂದಿದೆ. ಪ್ರಕರಣದ ಪ್ರಮುಖ ಆರೋಪಿಯೇ ಅವರ ಹೆಸರು ಹೇಳಿದ್ದಾರೆ. ಹಾಗಾಗಿ ಪಿಣರಾಯಿ ವಿಜಯನ್ ಇದನ್ನು ಚುನಾವಣೆ ಷಡ್ಯಂತ್ರ ಎನ್ನಬಹುದು. ಆದರೂ ಈಗ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದು ಸೂಕ್ತ ಎಂದು ಕೇಂದ್ರ ಸಚಿವ ಸದಾನಂದ ಗೌಡ ಒತ್ತಾಯಿಸಿದರು.