ಬೆಂಗಳೂರು: ನೀರು ಲಭ್ಯವಿರುವ ಹಳ್ಳಿಗಳ ಪ್ರತಿ ಮನೆಗೆ ಜಲ ಜೀವನ್ ಮಿಷನ್ ನಡಿ 'ನಲ್ಲಿ ' ನೀರಿನ ಸಂಪರ್ಕ ಕಲ್ಪಿಸುವ (ಹರ್ ಘರ್ ಜಲ್) ಯೋಜನೆ ನಿಗದಿತ ಅವಧಿಯಲ್ಲಿ ಮುಗಿಯಲಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರ್ ಘರ್ ಜಲ್ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣ : ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶನಿವಾರ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದರು. ಸದ್ಯದ ಪ್ರಗತಿ ಪ್ರಕಾರ, ದೇಶದ 101 ಜಿಲ್ಲೆಗಳ 1,39,579 ಗ್ರಾಮಗಳ ಪ್ರತಿ ಮನೆ ನಲ್ಲಿ ನೀರಿನ ಸಂಪರ್ಕ ಪಡೆದಿವೆ. ಕೋವಿಡ್ ಕಾರಣದಿಂದ ಕರ್ನಾಟಕ ಕಳೆದ ವರ್ಷ ಹಿಂದೆ ಬಿದ್ದಿತ್ತು. ಈಗ ವೇಗವಾಗಿ ಅನುಷ್ಠಾನಕ್ಕೆ ತರುತ್ತಿದ್ದು, 2022-23ನೇ ಸಾಲಿನ ಬಜೆಟ್‌ನಲ್ಲಿ 7,000 ಕೋಟಿ ರೂ. ಕಾದಿಡುವ ಮೂಲಕ 2024ರ ಗಡುವಿನೊಳಗೆ ಪೂರ್ಣಗೊಳಿಸುವ ಬದ್ಧತೆಯನ್ನು ಪ್ರಕಟಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಖಾಸಗಿ ಏಜೆನ್ಸಿ ಮೂಲಕ ಮಾಡಲಾಗುತ್ತಿದೆ. 5 ಲಕ್ಷ ಹಳ್ಳಿಗಳಲ್ಲಿ ವಾಟರ್ ಕಮಿಟಿ ನೇಮಿಸಲಾಗಿದೆ. ನೀರಿನ ಪ್ರಮಾಣ, ಶುದ್ಧತೆ ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಲ್ಯಾಬ್ ನಿರ್ಮಿಸಲಾಗುವುದು. ಕರ್ನಾಟಕದ ಕೊಡುಗೆಯೂ ಕಡಿಮೆಯಿಲ್ಲ. ಅಪ್ಡೇಟ್ ಉಪಕರಣಗಳ ಮೂಲಕ 6 ತಿಂಗಳ ಅವಧಿಯ ನೀರಿನ ಶುದ್ಧತೆಯನ್ನು ಪರಿಶೀಲಿಸಬಹುದು. 60 ಸಾವಿರ ಕೋಟಿಯನ್ನು ಕೇಂದ್ರ ಬಜೆಟ್‌ನಲ್ಲಿ ಕುಡಿಯುವ ನೀರು ಮತ್ತು ಸ್ವಚ್ಚ ಭಾರತ್ ಯೋಜನೆಗಾಗಿ ಮೀಸಲಿಡಲಾಗಿದೆ. ಕರ್ನಾಟಕ ಸರ್ಕಾರ ಕೂಡ ದೊಡ್ಡ ಮಟ್ಟದಲ್ಲಿ ಜಲಜೀವನ್ ಮಿಷನ್ಗೆ ಕೊಡುಗೆ ನೀಡುತ್ತಿದೆ. ನಾನು ಎಲ್ಲಾ ರಾಜ್ಯದ ಸರ್ಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಶಾಲೆ ಮತ್ತು ಅಂಗನ ವಾಡಿಗಳಲ್ಲಿ ಜಲ ಜೀವನ್ ಮಿಷನ್:ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಧ್ಯಪ್ರದೇಶ, ತಮಿಳುನಾಡು, ಪಾಂಡಿಚೇರಿ ರಾಜ್ಯಗಳು ಮತ್ತು ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳಿಗೆ ಜಲ ಜೀವನ್ ಮಿಷನ್‌ನಡಿ 20,487.58 ಕೋಟಿ ರೂ., ಸ್ವಚ್ಛ ಭಾರತ್ ಮಿಷನ್‌ನಡಿ 1,355.13 ಕೋಟಿ ರೂ. 15ನೇ ಹಣಕಾಸು ಆಯೋಗದ ಅಡಿ 7,498 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಅಲ್ಲದೆ, ಈ ಆರು ರಾಜ್ಯಗಳ 2.25 ಲಕ್ಷ ಶಾಲೆಗಳು ಮತ್ತು 2.31 ಲಕ್ಷ ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಗುರಿಯಿದೆ ಎಂದರು.
ಈ ಪೈಕಿ ಶೇ.74ರಷ್ಟು ಶಾಲೆಗಳು ಮತ್ತು ಶೇ.60ರಷ್ಟು ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. 19 ರಾಜ್ಯಗಳ 117 ಮಹತ್ವಾಕಾಂಕ್ಷಿ ಜಿಲ್ಲೆಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ತೆಲಂಗಾಣದ ಮೂರು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪೂರ್ಣಗೊಂಡಿದ್ದು, ಉಳಿದ ರಾಜ್ಯಗಳಲ್ಲಿ ಶೇ 19 ರಿಂದ 52ರಷ್ಟು ಸಾಧನೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ದೇಶದ 44,575 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತ:ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)ನ ಹಂತ ಎರಡರಡಿ ಶೌಚಗೃಹ ನಿರ್ಮಾಣ, ಘನ ಮತ್ತು ದ್ರವರೂಪದ ತ್ಯಾಜ್ಯ ನಿರ್ವಹಣೆಗೆ 1,40,881 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಎರಡನೇ ಹಂತದಲ್ಲಿ ಈವರೆಗೆ 44,575 ಗ್ರಾಮಗಳು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಣೆ ಮಾಡಿಕೊಂಡಿವೆ. ಒಟ್ಟು 1.2 ಲಕ್ಷ ಸಮುದಾಯ ಶೌಚ ಗೃಹಗಳನ್ನು ನಿರ್ಮಿಸಲಾಗಿದೆ. ಚಾಲ್ತಿ ಆರ್ಥಿಕ ವರ್ಷದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 5.61 ಲಕ್ಷ ವೈಯಕ್ತಿಕ ಶೌಚಗೃಹ, 11,000 ಸಮುದಾಯ ಶೌಚ ಸಮುಚ್ಛಯ ನಿರ್ಮಿಸಿದ್ದು, 31,000 ಹಳ್ಳಿಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಅಲ್ಲದೆ, 35,739 ಗ್ರಾಮಗಳಲ್ಲಿ ಘನತ್ಯಾಜ್ಯ, 9,386 ಗ್ರಾಮಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆಗೆ ವ್ಯವಸ್ಥೆಗಳಾಗಿವೆ ಎಂದು ವಿವರಿಸಿದರು.
ಇದನ್ನೂ ಓದಿ:11 ವಿಮಾನಗಳಲ್ಲಿ 2,200 ಭಾರತೀಯರು ಉಕ್ರೇನ್ನಿಂದ ನಾಳೆ ತಾಯ್ನಾಡಿಗೆ: ಅಮಿತ್ ಶಾ ಮಾಹಿತಿ