ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರ್ಕಾರದ ಮೂರನೇ ವರ್ಷದ ನಾಲ್ಕನೇ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು, ರಾಜ್ಯದಿಂದ ಆಯ್ಕೆಯಾಗಿರುವ ಕಾರಣದಿಂದ ಕರ್ನಾಟಕದ ಜನತೆ ಹಾಗೂ ಪಕ್ಷ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದೆ. ನಿರ್ಮಲಾ ಜೋಳಿಗೆಯಿಂದ ರಾಜ್ಯಕ್ಕೆ ಇಂದು ಯಾವ ಉಡುಗೊರೆ ಸಿಗಲಿದೆ ಎನ್ನುವ ಕುತೂಹಲ ಮೂಡಿದೆ.
2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರದ ಮೋದಿ ಸಂಪುಟದಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿದ್ದು, ಕಳೆದ ಮೂರು ವರ್ಷದಿಂದ ಹಣಕಾಸು ಸಚಿವೆಯಾಗಿ ಬಜೆಟ್ ಮಂಡಿಸುತ್ತಾ ಬಂದಿದ್ದಾರೆ. ಇದೀಗ ಇಂದು ತಮ್ಮ ನಾಲ್ಕನೇ ಬಜೆಟ್ ಮಂಡಿಸುತ್ತಿದ್ದಾರೆ. ಅದರಲ್ಲಿ ರಾಜ್ಯಕ್ಕೆ ವಿಶೇಷ ಕೊಡುಗೆ ಸಿಗುತ್ತದೆಯಾ ಅನ್ನೋದು ಸದ್ಯದ ಪ್ರಶ್ನೆ.
ರಾಜ್ಯದ ನಿರೀಕ್ಷೆಗಳು:
ರಾಜ್ಯದ ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಸಿಗಲಿದೆ ಎನ್ನುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ರಾಜ್ಯದ ರಸ್ತೆಗಳು, ರೈಲ್ವೆ ಯೋಜನೆಗಳು, ನೀರಾವರಿ ವಿಷಯ, ರಾಜ್ಯಕ್ಕೆ ಹೆಚ್ಚು ವರವಾಗುವ, ಅನುಕೂಲಕರ ಬಜೆಟ್ ಮಂಡನೆಯಾಗಲಿದೆ ಎನ್ನುವ ನಿರೀಕ್ಷೆಯನ್ನು ರಾಜ್ಯದ ಜನ ಹೊಂದಿದ್ದಾರೆ ಎಂದು ಬಜೆಟ್ ನಿರೀಕ್ಷೆ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ತೆರಿಗೆ ಹೆಚ್ಚಳ ಮಾಡಲಾರರು. ಆದರೆ ಜನರ ಕೈಗೆ ಹಣಕಾಸು ಓಡಾಡುವ ರೀತಿ, ಕೈಗಾರಿಕೆಗಳ ಚೇತರಿಕೆಗೆ ಟಾನಿಕ್ ಕೊಡುವ, ಸಣ್ಣ ಮಧ್ಯಮ ಕೈಗಾರಿಕೆಗಳು, ರೈತರು, ಶಿಕ್ಷಣ, ರೈಲು, ರಸ್ತೆ ಮಾರ್ಗ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡುವ ನಿರೀಕ್ಷೆ ಇದೆ. ಸದ್ಯ 10 ಲಕ್ಷ ಕೋಟಿ ರೂ. ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡಿದ್ದಾರೆ, ಈ ಬಾರಿ ಮೂಲಸೌಕರ್ಯದ ಮೇಲೆ ಹೆಚ್ಚು ಹಣಕಾಸು ವ್ಯಯ ಮಾಡುವ ನಿರೀಕ್ಷೆ ಇದೆ ಎಂದರು.
ಕೋವಿಡ್ ನಿರ್ವಹಣೆ ಮಾಡಿ ದೇಶದ ಜನರನ್ನು ಕೋವಿಡ್ ಸಂಕಟದಿಂದ ಹೇಗೆ ಪಾರು ಮಾಡಿದರೋ ಅದೇ ರೀತಿ ದೇಶದ ಆರ್ಥಿಕ ಸಂಕಟಗಳಿಗೂ ಒಳ್ಳೆಯ ಬಜೆಟ್ ಇಂದು ಮಂಡನೆಯಾಗಲಿದೆ ಎನ್ನುವ ವಿಶ್ವಾಸವಿದೆ. ಇಡೀ ವಿಶ್ವದಲ್ಲಿ ಕೋವಿಡ್ ಅನ್ನು ಬಹಳ ಯಶಸ್ವಿಯಾಗಿ ಮೋದಿ ಸರ್ಕಾರ ನಿರ್ವಹಣೆ ಮಾಡಿದೆ. ಭಾರತದ ಆರ್ಥಿಕತೆ ಪ್ರಪಂಚದಲ್ಲಿ ಬಹಳ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಮೈನಸ್ ತಲುಪಿದ್ದ ಜಿಡಿಪಿ ಈಗ 7.9 ವರೆಗೆ ತಲುಪಿದೆ ಎಂದು ತಿಳಿಸಿದರು.