ಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ಅಸ್ಸಾಂ ಮೂಲದ ಇಬ್ಬರು ಶಂಕಿತ ಉಗ್ರರ ವಿಚಾರಣೆ ತೀವ್ರಗೊಂಡಷ್ಟು ಹಲವು ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಉಗ್ರವಾದದತ್ತ ಮುಖ ಮಾಡಿದ್ದ ಆರೋಪಿಗಳು, ಸಾಮಾಜಿಕ ಜಾಲತಾಣವಾದ ಟೆಲಿಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಉಗ್ರ ನಾಯಕರ ಭಾಷಣದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ವಿಡಿಯೋ ಪೋಸ್ಟ್ ಮಾಡುತ್ತಿರುವ ಬಗ್ಗೆ ಈ ಹಿಂದೆ ಫೇಸ್‌ಬುಕ್ ಸಂಸ್ಥೆ ಇಬ್ಬರಿಗೆ ಎಚ್ಚರಿಸಿತ್ತು. ನಂತರ ಖಾತೆಗಳನ್ನು ರದ್ದು ಮಾಡಿದ್ದರೂ ಅಖ್ತರ್ ಹುಸೇನ್ ನಕಲಿ ಅಕೌಂಟ್ ತೆರೆದು ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸಿದ್ದ. ಬೆಂಗಾಲಿ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಬರಹಗಳು ಹಾಗೂ ವಿಡಿಯೋ ಕುರಿತಾಗಿ ಮಾಹಿತಿ ನೀಡುವಂತೆ ಫೇಸ್ ಬುಕ್, ಟೆಲಿಗ್ರಾಂ, ವಾಟ್ಸ್ಆ್ಯಪ್ ಕಂಪನಿಗಳಿಗೆ ಸಿಸಿಬಿ ಪೊಲೀಸರು ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಉಗ್ರತ್ವದ ಬಗ್ಗೆ ಸಕ್ರಿಯವಾಗಿದ್ದರ ಕುರಿತು ಗಮನಿಸಿದ ಆಲ್ ಖೈದಾ ಸಂಘಟನೆಯ ಸದಸ್ಯರು, ಇವರನ್ನು ಸಂಪರ್ಕಿಸಿ ಜಿಹಾದ್ ಹೋರಾಟದ ಬಗ್ಗೆ ಬ್ರೈನ್ ವಾಶ್ ಮಾಡಿದ್ದರು. ತಮಿಳುನಾಡಿನ ಸೇಲಂನಲ್ಲಿ ಬಂಧಿತನಾಗಿದ್ದ ಆದಿಲ್ ಹುಸೇನ್ ಉರುಫ್ ಜುಬಾನ್ ಎಂಬಾತ ಮನಪರಿವರ್ತಿಸಿದ್ದರು. ಅಚ್ಚರಿ ವಿಷಯವೆಂದರೆ, ಇಬ್ಬರು ಶಂಕಿತರಿಗೂ ಪರಿಚಯವಿರಲಿಲ್ಲ. ನಾಲ್ಕು ತಿಂಗಳ ಹಿಂದಷ್ಟೇ ಆಲ್ ಖೈದಾ ಸಂಘಟನೆಯ ಪಶ್ಚಿಮ ಬಂಗಾಳ ಮೂಲದ ಉಗ್ರ ಇವರಿಬ್ಬರ ಸಂಪರ್ಕಕ್ಕೆ ಕಾರಣನಾಗಿದ್ದ. ಸಿಸಿಬಿ ಬಂಧಿಸುವ ಒಂದು ವಾರದ ಹಿಂದೆ ಇಬ್ಬರಿಗೆ ಕಾಶ್ಮೀರಕ್ಕೆ ಬನ್ನಿ ಎಂದು ಆಹ್ವಾನ ನೀಡಿರುವುದು ತನಿಖೆಯ ವೇಳೆ ಬಯಲಾಗಿದೆ.