ಬೆಂಗಳೂರು:ಜೈಲಿನಲ್ಲಿ ಸಹಕೈದಿಯೋರ್ವನಿಂದ ಪ್ರೇರಿತಗೊಂಡು ಸೇಫ್ಟಿ ಪಿನ್ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಕೆ.ಜಿ.ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿಯ ರೂಪೇನ ಅಗ್ರಹಾರ ನಿವಾಸಿಗಳಾದ ಕಿಶೋರ್ ಹಾಗೂ ಪ್ರವೀಣ್ ಬಂಧಿತರು. ಬೈಕ್ ಕದಿಯುವುದೇ ಕಾಯಕ ಮಾಡಿಕೊಂಡಿದ್ದ ಕಿಶೋರ್ ಕಳೆದ ಒಂದೆರಡು ವರ್ಷಗಳಿಂದ ನಗರದ ವಿವಿಧೆಡೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಜೈಲುಪಾಲಾಗಿದ್ದ.
ಈತ ಜೈಲಿನಲ್ಲಿ ಸಹ ಕೈದಿಯಿಂದ ಬೈಕ್ ಹೇಗೆ ಕದಿಯಬೇಕು ಎಂದು ತಿಳಿದುಕೊಂಡಿದ್ದ. ಕಾರಾಗೃಹದಿಂದ ಹೊರಗೆ ಬರುತ್ತಿದ್ದಂತೆ ಸಹಚರ ಪ್ರವೀಣ್ ಜತೆ ಸೇರಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹ್ಯಾಂಡಲ್ ಮುರಿದು, ಸೇಫ್ಟಿ ಪಿನ್ ಬಳಸಿ ಸುಲಭವಾಗಿ ಕಳ್ಳತನ ಮಾಡುತ್ತಿದ್ದರು.
ಆರೋಪಿಗಳ ಬಂಧನದಿಂದ ಕೆ.ಜಿ.ಹಳ್ಳಿ, ಹೈಗ್ರೌಂಡ್ಸ್ , ಬಾಣಸವಾಡಿ, ಕೆಂಗೇರಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 18ಕ್ಕೂ ಹೆಚ್ಚು ಪ್ರಕರಣಗಳನ್ನ ಭೇದಿಸಲಾಗಿದೆ. ಸದ್ಯ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.