ಬೆಂಗಳೂರು : ಅಮೆರಿಕದಿಂದ ಮರಳಿ ಭಾರತದಲ್ಲಿ ನೆಲೆಯೂರುವ ಪ್ರಯತ್ನದಲ್ಲಿದ್ದ ಮಹಿಳೆಗೆ ಬರೋಬ್ಬರಿ 2.5 ಕೋಟಿ ವಂಚಿಸಿದ ಸರ್ವಿಸ್ ಅಪಾರ್ಟ್‌ಮೆಂಟ್ ಸಿಬ್ಬಂದಿಯೊಬ್ಬನನ್ನು ಹುಳಿಮಾವು ಠಾಣಾ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಬಿಹಾರ ಮೂಲದ ಕನ್ಹಯ್ಯ ಕುಮಾರ್ ಯಾದವ್ ಬಂಧಿತ ಆರೋಪಿ. 75 ವರ್ಷದ ಮಣಿ ತಿರುಮಲೈ ಮೋಸಹೋದ ಮಹಿಳೆ.
1973ರಲ್ಲಿ ಪತಿಯೊಂದಿಗೆ ಅಮೆರಿಕಕ್ಕೆ ತೆರಳಿ ನೆಲೆಸಿದ್ದ ಮಣಿ ತಿರುಮಲೈ, ಪತಿಯ ನಿಧನದ ನಂತರ ಕೋವಿಡ್ ಸಂದರ್ಭದಲ್ಲಿ ಭಾರತಕ್ಕೆ ಮರಳಿದ್ದರು. ಈ ವೇಳೆ, ಹುಳಿಮಾವಿನ ಸಾರ್ವಭೌಮನಗರದ ಸರ್ವಿಸ್ ಅಪಾರ್ಟ್ಮೆಂಟ್ವೊಂದರಲ್ಲಿ ವಾಸವಿದ್ದ ಮಣಿ ತಿರುಮಲೈಗೆ ಆರೋಪಿ ಪರಿಚಯವಾಗಿದ್ದ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಮಣಿ ತಿರುಮಲೈಗೆ ಸಹಾಯ ಮಾಡುತ್ತಾ ನಂಬಿಕೆ ಸಂಪಾದಿಸಿದ್ದ ಆರೋಪಿ ಅವರ ಮಗನಂತೆ ಬಾಂಧವ್ಯ ಬೆಳೆಸಿಕೊಂಡಿದ್ದ.
ಮಣಿ ತಿರುಮಲೈ ಸಹ ಆರೋಪಿಯನ್ನು ಸಂಪೂರ್ಣವಾಗಿ ನಂಬಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ಮನೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದ ತಿರುಮಲೈಗೆ ಆರೋಪಿ ಕನ್ಹಯ್ಯನೇ ಕಳೆದ ಏಪ್ರಿಲ್‌ನಲ್ಲಿ ಬಿಟಿಎಂ ಲೇಔಟ್ ನಾಲ್ಕನೇ ಹಂತದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು ತೋರಿಸಿದ್ದ. ಮಾತುಕತೆಯ ಬಳಿಕ 2.65 ಕೋಟಿಗೆ ಮನೆ ಖರೀದಿಗೆ ತಿರುಮಲೈ ನಿರ್ಧರಿಸಿದ್ದರು. ಅಷ್ಟರಲ್ಲಿ ತಮ್ಮ ಅನಾರೋಗ್ಯದ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಮನೆ ಮಾಲೀಕನಿಗೆ ಜುಲೈ ತನಕ ಕಾಯುವಂತೆ ತಿರುಮಲೈ ಹೇಳಿದ್ದರು.