ಬೆಂಗಳೂರು: ಕೇಂದ್ರ ಸರ್ಕಾರವು ಹೊರಡಿಸಿರುವ ಹತ್ತು ಹಲವು ನಿರ್ಬಂಧ ಆದೇಶಗಳ ವಿರುದ್ಧ ಟ್ವಿಟರ್ ಕಾನೂನು ಸಮರ ಆರಂಭಿಸಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಸಂಸ್ಥೆ, ಸಾರ್ವಜನಿಕರು ಟ್ವಿಟರ್ ಖಾತೆಯಲ್ಲಿ ಕೆಲವು ಮಾಹಿತಿ ನೋಡದಂತೆ ತಡೆಯಬೇಕೆನ್ನುವ ಹಾಗು ಕೇಂದ್ರ ಸರ್ಕಾರ ಸೂಚಿಸಿದ ಹಲವು ಖಾತೆಗಳನ್ನು ಅಮಾನತುಗೊಳಿಸಬೇಕು ಎಂದು ಸೂಚನೆ ನೀಡಿರುವುದನ್ನು ಪ್ರಶ್ನಿಸಿದೆ. ಕಳೆದ ವರ್ಷ 2021ರ ಫೆಬ್ರವರಿಯಿಂದ 2022ರ ಫೆಬ್ರವರಿ ನಡುವೆ ಕೇಂದ್ರ ಸರ್ಕಾರವು ವಿಧಿಸಿರುವ ಹಲವಾರು ನಿರ್ಬಂಧಗಳ ಆದೇಶಗಳನ್ನು ರದ್ದುಪಡಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದೆ.
ಈ ಸಂಬಂಧ ಟ್ವಿಟರ್, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಹೊರಡಿಸಿದ ನಿರ್ಬಂಧ ಆದೇಶಗಳನ್ನು ಅರ್ಜಿಯಲ್ಲಿ ಅನುಬಂಧ ಎ ಯಿಂದ ಕೆ ಎಂದು ಗುರುತಿಸಿ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಿತು. ಟ್ವಿಟರ್ನಲ್ಲಿ ಖಾತೆ ಮಟ್ಟದ ನಿರ್ಬಂಧ ಹೇರುವುದು ಅಸಮಾನತೆಯ ಕ್ರಮ. ಇದು ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಕೇಂದ್ರ ಸರ್ಕಾರವು ಆಕ್ಷೇಪವೆತ್ತಿರುವ 1,474 ಟ್ವಿಟರ್ ಖಾತೆಗಳು ಮತ್ತು 175 ಟ್ವೀಟ್‌ಗಳಲ್ಲಿ ಕೇವಲ 39 ಯುಆರ್‌ಎಲ್‌ಗಳ ನಿರ್ಬಂಧವನ್ನಷ್ಟೇ ಟ್ವಿಟರ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದೆ. ಉಳಿದ ಖಾತೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಕಾಯಿದೆ) ಸೆಕ್ಷನ್ 69 ಎ ಅಡಿಯ ನಿಯಮಾವಳಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬುದು ಟ್ವಿಟರ್ ವಾದ.
ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯ ನಿಯಮಾವಳಿಯಲ್ಲಿ ಪ್ರಸ್ತಾಪಿಸಿದಂತೆ ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮುಂತಾದ ಸಂದರ್ಭಗಳಲ್ಲಿ ಸಮಸ್ಯೆ ಎದುರಾದಾಗ ಟ್ವಿಟರ್‌ನಂತಹ ಮಧ್ಯವರ್ತಿಗಳನ್ನು ನಿರ್ದೇಶಿಸಲು ಸೆಕ್ಷನ್ 69 ಎ ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಈ ಪ್ರಕಾರ, ಕಂಟೆಂಟ್ ಅನ್ನು ನಿರ್ಬಂಧಿಸದಿದ್ದರೆ ಐಟಿ ಕಾಯ್ದೆಯಡಿ ಗಮನಾರ್ಹ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರದ ಐಟಿ ಇಲಾಖೆ ಕಳೆದ ವರ್ಷ ಜೂನ್ 27ರಂದು ಟ್ವಿಟರ್ಗೆ ಎಚ್ಚರಿಕೆ ನೀಡಿತ್ತು. ಆದರೆ, ಇದು ಐಟಿ ಕಾಯ್ದೆಯ ಉಲ್ಲಂಘನೆಯಲ್ಲವೆಂದು ಟ್ವಿಟರ್ ಕೇಂದ್ರ ಸರ್ಕಾರದ ಬಳಿ ವಾದಿಸಿತ್ತು.