ಬೆಂಗಳೂರು: ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಗರದ ಆನಂದರಾವ್ ವೃತ್ತದಲ್ಲಿ 50 ಮಹಡಿಯ ಅವಳಿ ಗೋಪುರ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಅನುದಾನದ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಈ ಅವಳಿ ಗೋಪುರದ ನಿರ್ಮಾಣ ವೆಚ್ಚ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ.
ಟ್ವಿನ್ ಟವರ್‌ಗೆ ಆರಂಭಿಕ ವಿಘ್ನ: ಬೆಂಗಳೂರಿನ ಅತಿ ಎತ್ತರದ ಅವಳಿ ಟವರ್ ಯೋಜನೆಗೆ ವೆಚ್ಚ ಪಾಲುದಾರಿಕೆ ಬಿಕ್ಕಟ್ಟು! - ಬೆಂಗಳೂರಿನ ಅತಿ ಎತ್ತರದ ಅವಳಿ ಟವರ್ ಯೋಜನೆ
ಆನಂದರಾವ್ ವೃತ್ತದಲ್ಲಿ 50 ಮಹಡಿಯ ಅವಳಿ ಗೋಪುರ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಅನುದಾನದ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಈ ಅವಳಿ ಗೋಪುರದ ನಿರ್ಮಾಣ ವೆಚ್ಚ ನಿರ್ವಹಣೆಯೇ ತಲೆನೋವಾಗಿ ಪರಿಣಮಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಕಾಮಗಾರಿ ಪ್ರಾರಂಭವಾದ 2 ವರ್ಷದಲ್ಲಿ ಯೋಜನೆ ಪೂರ್ಣಗೊಂಡು ಬೆಂಗಳೂರಿನಲ್ಲಿರುವ ಸರ್ಕಾರದ ಪ್ರಮುಖ ಕಚೇರಿಗಳು ಒಂದೇ ಸೂರಿನಡಿಗೆ ಬರುತ್ತವೆ.
ಕಳೆದ ವರ್ಷ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ತಮ್ಮ ಬಜೆಟ್‌ನಲ್ಲಿ ಆನಂದ್ ರಾವ್ ವೃತ್ತದಲ್ಲಿ ಅತಿ ಉದ್ದನೆಯ ಅವಳಿ ಗೋಪುರ ನಿರ್ಮಿಸುವ ಘೋಷಣೆ ಮಾಡಿದ್ದರು. ಬಜೆಟ್‌ನಲ್ಲಿ 400 ಕೋಟಿ ರೂ. ವೆಚ್ಚದಲ್ಲಿ 25 ಮಹಡಿಗಳ ಕಟ್ಟಡ ನಿರ್ಮಿಸಲು ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದರು. ಬಳಿಕ ಯೋಜನೆಯನ್ನು ಬದಲಿಸಿ ರಾಷ್ಟ್ರೀಯ ನಿರ್ಮಾಣ ನಿಗಮ(ಎನ್‌ಬಿಸಿಸಿ)ದ ಸಹಭಾಗಿತ್ವದಲ್ಲಿ 50 ಮಹಡಿಗಳ ಅವಳಿ ಗೋಪುರ ನಿರ್ಮಿಸಲು ಉದ್ದೇಶಿಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವಳಿ ಗೋಪುರ ನಿರ್ಮಾಣಕ್ಕೆ ಸಂಪುಟ ಸಭೆ ಅನುಮೋದನೆ ನೀಡಿತ್ತು.
ಅದರಂತೆ 1,250 ಕೋಟಿ ರೂ. ವೆಚ್ಚದಲ್ಲಿ 23.94 ಲಕ್ಷ ಚದರ ಅಡಿ ವಿಸ್ತೀರ್ಣದ 50 ಮಹಡಿಗಳ ಅವಳಿ ಗೋಪುರ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಆನಂದರಾವ್ ವೃತ್ತದ ಎನ್.ಎಚ್. ಕಾಂಪೌಂಡ್‌ನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದ 8.20 ಎಕರೆ ಜಮೀನು ಇದೆ. ಸದ್ಯ ಈ ಜಾಗದಲ್ಲಿ 1940ನೇ ಇಸವಿಗಿಂತ ಮೊದಲು ನಿರ್ಮಿಸಿದ ಕಟ್ಟಡಗಳಿವೆ. ಅವುಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 15 ಲಕ್ಷ ಚದರ ಅಡಿ ಪ್ರದೇಶದಲ್ಲಿ ಬಿಲ್ಡ್ ಅಫ್ ಏರಿಯಾ ಹೊಂದಿರಲಿದೆ. ಆದರೆ ಇದೀಗ ಅವಳಿ ಕಟ್ಟಡದ ನಿರ್ಮಾಣ ವೆಚ್ಚ ಭರಿಸುವ ಮಾದರಿಯೇ ಅಡ್ಡಗಾಲಾಗಿ ಪರಿಣಮಿಸಿದೆ.
ಅವಳಿ ಕಟ್ಟಡಕ್ಕೆ ವೆಚ್ಚ ಪಾಲುದಾರಿಕೆ ಬಿಕ್ಕಟ್ಟು
ನಗರದಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಆನಂದ್ ರಾವ್ ಸರ್ಕಲ್ ಬಳಿ 50 ಮಹಡಿಗಳ ಟ್ವಿನ್ ಟವರ್ ನಿರ್ಮಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಪಡಿಸಲಾಗಿದೆ.
ಬೆಂಗಳೂರಿನಲ್ಲೇ ಅತಿ ಉದ್ದನೆಯ ಕಟ್ಟಡ ಎಂಬ ಹೆಗ್ಗಳಿಕೆಗೆ ಈ ಪ್ರಸ್ತಾಪಿತ ಟ್ವಿನ್ ಟವರ್ ಪಾತ್ರವಾಗಲಿದೆ. ಈಗಾಗಲೇ NBCC (ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮ) ಈ ಸಂಬಂಧ ಡಿಪಿಎಆರ್ ಸಿದ್ದಪಡಿಸಲಿದೆ. ಪ್ರಸ್ತುತವಾಗಿ ಸಿದ್ದಪಡಿಸಿರುವ ಪ್ರಸ್ತಾವನೆಯು ಎಫ್‌ಎಆರ್ 2.5 ಅನುಪಾತದಲ್ಲಿದೆ. ಆ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಗಳು ಎಫ್‌ಎಆರ್ 4.0 ಅನುಪಾತದಲ್ಲಿರುವುದರಿಂದ ಅದೇ ಮಾದರಿಯಲ್ಲಿ ಟ್ವಿನ್ ಟವರ್‌ಅನ್ನು ನಿರ್ಮಿಸಲು ಸೂಚನೆ ನೀಡಲಾಗಿದೆ.
ಅನುದಾನದ ಕೊರತೆಯ ಹಿನ್ನೆಲೆ ವೆಚ್ಚ ಪಾಲುದಾರಿಕೆಯ ಫಾರ್ಮುಲಾದಲ್ಲಿ ಸರ್ಕಾರ ಈ ಟ್ವಿನ್ ಟವರ್ ನಿರ್ಮಾಣದ ಮೊರೆ ಹೋಗಿದೆ. ಎನ್‌ಬಿಸಿಸಿಗೆ ಕಟ್ಟಡ ನಿರ್ಮಾಣ, ವೆಚ್ಚ ಪಾಲುದಾರಿಕೆಯ ಹೊಣೆ ನೀಡುವ ಮೂಲಕ ಸರ್ಕಾರ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದರೆ, NBCC ಯೋಜನೆಯ ವೆಚ್ಚ ಭರಿಸಲು ಹಿಂದೇಟು ಹಾಕುತ್ತಿದೆ. ಟ್ವಿನ್ ಟವರ್ ಸಂಬಂಧ ಕಟ್ಟಡ ನಿರ್ಮಾಣ ಕಾಮಗಾರಿ ಬಿಟ್ಟರೆ ಬೇರೆ ಯಾವುದೇ ಹೊಣೆಯನ್ನು ಹೊರಲು ತಯಾರಿಲ್ಲ ಎಂದು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣ ಸಂಬಂಧ ಸಾಲವನ್ನು ರಾಜ್ಯ ಸರ್ಕಾರವೇ ಮಾಡಿಕೊಡಬೇಕು. NBCC ಯೋಜನೆಯ ಯಾವುದೇ ವೆಚ್ಚ ಅಪಾಯವನ್ನು ವಹಿಸಲು ತಯಾರಿಲ್ಲ. ಈಗಾಗಲೇ ಅನುದಾನದ ಕೊರತೆ ಎದುರಿಸುತ್ತಿರುವ ಲೋಕೋಪಯೋಗಿ ಇಲಾಖೆಗೆ ಇದರಿಂದ ಭಾರೀ ಹೊರೆ ಬೀಳಲಿದೆ. ಕನಿಷ್ಠ ಹಣಕಾಸಿನ ಹೊರೆಯೊಂದಿಗೆ ಟ್ವಿನ್ ಟವರ್ ಯೋಜನೆ ಅನುಷ್ಟಾನಗೊಳಿಸುವುದು ಸರ್ಕಾರದ ಚಿಂತನೆ. ಹೀಗಾಗಿ NBCC ಜೊತೆ ವೆಚ್ಚ ಪಾಲುದಾರಿಕೆಯ ಬಿಕ್ಕಟ್ಟು ಏರ್ಪಟ್ಟಿರುವ ಹಿನ್ನೆಲೆ ಸದ್ಯ ಟ್ವಿನ್ ಟವರ್ ನಿರ್ಮಾಣ ಯೋಜನೆಗೆ ಆರಂಭಿಕ ವಿಘ್ನ ಎದುರಾಗಿದೆ.
ಪಿಪಿಪಿ ಮಾದರಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಚಿಂತನೆ ನಡೆಸುತ್ತಿದೆ. ಆದರೆ, ಕಾರ್ಯಸಾಧುವಾಗ ಬಲ್ಲ ಪಿಪಿಪಿ ಮಾದರಿಯನ್ನೂ ಪರಿಗಣಿಸುತ್ತಿದೆ. ಈ ಸಂಬಂಧ ಲೋಕೋಪಯೋಗಿ ಇಲಾಖೆ ಚರ್ಚೆ ನಡೆಸುತ್ತಿದೆ. ಕಾಮಗಾರಿ ಪ್ರಾರಂಭವಾದ ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಸದ್ಯ ವೆಚ್ಚ ಪಾಲುದಾರಿಕೆಯ ಬಿಕ್ಕಟ್ಟು ಇನ್ನು ಒಂದೆರಡು ತಿಂಗಳಲ್ಲಿ ಬಗೆಹರಿಯುವ ವಿಶ್ವಾಸವನ್ನು ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ವ್ಯಕ್ತಪಡಿಸಿದ್ದಾರೆ.