ಬೆಂಗಳೂರು:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಡುವೆ ಟ್ವೀಟ್ ವಾರ್ ಜೋರಾಗಿ ನಡೆದಿದೆ. ಏಟಿಗೆ ಪ್ರತಿಏಟು ಎಂಬಂತೆ ಇಬ್ಬರೂ ಹಿರಿಯ ಮುಖಂಡರ ನಡುವೆ ನಡೆಯುತ್ತಿರುವ ವಾದ-ಪ್ರತಿವಾದಗಳು ಈಗ ತೀಕ್ಷ್ಣ ಸ್ವರೂಪ ಪಡೆದುಕೊಂಡಿವೆ.
ಸಿದ್ದರಾಮೋತ್ಸವದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅವನತಿಯಾಗಲಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಯನ್ನು ಟ್ವಿಟರ್ನಲ್ಲಿ ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ಖಾತೆ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಇಂದು ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತನಾಡಿದ್ದ ಜೋಶಿ, "ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ಮುಳುಗಿಸಿದರು. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಳುಗಿಸಲು ಹೊರಟಿದ್ದಾರೆ. ಅವರಂತಹ ಹಿರಿಯ ನಾಯಕರು ಕೂಡ ಸಿದ್ದರಾಮಯ್ಯನವರಿಂದ ಬೇಸತ್ತಿದ್ದಾರೆ. ಹಾಗಾದಲ್ಲಿ, ಕಾಂಗ್ರೆಸ್ ನಾಶವಾಗಿ ಬಿಜೆಪಿಗೆ ಅನುಕೂಲ ಆಗುತ್ತದೆ" ಎಂದಿದ್ದರು.
ಜೋಶಿಯವರ ಈ ಹೇಳಿಕೆಯಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ, ಯಡಿಯೂರಪ್ಪ ಅವರ ಹೆಸರು ಉಲ್ಲೇಖಿಸಿ ಟ್ವಿಟ್ಟರ್ನಲ್ಲಿ ಜೋಶಿಯವರನ್ನು ಕಟುವಾಗಿ ಟೀಕಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪನವರು ಜೈಲಿಗೆ ಹೋಗುವುದರ ಹಿಂದೆ ನಿಮ್ಮ ಕೈವಾಡ ಇದೆಯಲ್ಲವೇ ಜೋಶಿಯವರೇ? ಎಂದು ಪ್ರಶ್ನಿಸಿದ್ದರು.
ಸಿದ್ದರಾಮಯ್ಯ ಅವರ ಈ ಟೀಕೆಗೆ ಪ್ರತ್ಯುತ್ತರ ನೀಡಿರುವ ಜೋಶಿ, ನಿಮ್ಮ ಅಧಿಕಾರದ ದುರಾಸೆಗೆ ಕಾಂಗ್ರೆಸ್ಸಿನವರೇ ಆದ ಡಿಕೆಶಿ ಅವರನ್ನು ಜೈಲಿಗೆ ಕಳುಹಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ. ಇದನ್ನು ಡಿ.ಕೆ.ಶಿವಕುಮಾರ್ ಅವರ ತಾಯಿಯೇ ಹೇಳಿದ್ದಾರೆ. ಅದನ್ನು ಮರೆತ ಸಿದ್ದರಾಮಯ್ಯನವರು, ಬಿಜೆಪಿಯಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಬೇರೆಯವರು ಮುಗಿಸಿದರು ಎಂದು ಸುಳ್ಳು ಹೇಳುತ್ತಿದ್ದಾರೆ. ಅವರಲ್ಲಿ ನೈತಿಕತೆ ಎನ್ನುವುದು ಏನಾದರೂ ಉಳಿದಿದೆಯಾ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.
ಸಿದ್ದರಾಮಯ್ಯನವರ ರಾಜಕೀಯ ನಡೆಯ ಬಗ್ಗೆ ಕಟುವಾಗಿ ಟೀಕಿಸಿರುವ ಜೋಶಿ, "ಒಳ ಸಂಚು ಮತ್ತು ಷಡ್ಯಂತ್ರವನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರಿಗೆ ತಾವು ಮಾಡಿದ ಕುತಂತ್ರಗಳೇ ಬೇರೆ ಪಕ್ಷಗಳಲ್ಲೂ ಇರಬಹುದು ಎಂದು ಭಾಸವಾಗುತ್ತಿದೆ. ಯಾಕೆಂದರೆ ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ ಎಂದು ಹೇಳಿದ್ದಾರೆ.
ಅಲ್ಲದೇ ಸಿಎಂ ಆಗಿದ್ದ ಯಡಿಯೂರಪ್ಪನವರನ್ನು ಜೈಲಿಗೆ ಕಳುಹಿಸಲು ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿ ಯಾವ ರೀತಿ ಕಾರಣರಾದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಡಿ ಮತ್ತು ಸಿಬಿಐ ಬಳಸಿ ಪಕ್ಷವನ್ನು ಒಡೆದು ನೀವು ಯಾವ ರೀತಿಯಾಗಿ ಮುಖ್ಯಮಂತ್ರಿಯಾಗಿದ್ದೀರಿ ಎನ್ನುವುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ಸಿಎಂ ಆದಾಗ ಬೆಂಕಿ ಬಿದ್ದದ್ದು ಯಾರ ಹೊಟ್ಟೆಗೆ ಪ್ರಹ್ಲಾದ್ ಜೋಶಿ?: ಸಿದ್ದರಾಮಯ್ಯ ಪ್ರಶ್ನೆ