ಬೆಂಗಳೂರು:ಸಾರ್ಥಕ್ಯ ತುಂಬು ಜೀವನ ನಡೆಸಿದ ಶತಾಯುಷಿ, ನಡೆದಾಡುವ ವಿಶ್ವಕೋಶ, ಶಬ್ದ ಬ್ರಹ್ಮ ಪ್ರೊ.ಜಿ.ವೆಂಕಟಸುಬ್ಬಯ್ಯ (108) ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಪದ್ಮಶ್ರೀ, ಪಂಪಶ್ರೀ, ಭಾಷಾ ಸಮ್ಮಾನ್ ಪುರಸ್ಕೃತ ನಿಘಂಟು ತಜ್ಞ, ಹಿರಿಯ ಸಂಶೋಧಕ ಜಿ.ವೆಂಕಟಸುಬ್ಬಯ್ಯ ನಿಧನದಿಂದ ಕನ್ನಡ ಸಾರಸ್ವತಲೋಕದ ಧೀಮಂತ ಚೇತನ ಇನ್ನು ನೆನಪು ಮಾತ್ರ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
50 ಪುಸ್ತಕಗಳನ್ನು, 14 ನಿಘಂಟುಗಳನ್ನು ಪ್ರಕಟಗೊಳಿಸಿರುವುದಲ್ಲದೇ “ಇಗೋ ಕನ್ನಡ’’ ಎಂಬ ಸಾಮಾಜಿಕ ನಿಘಂಟಿನ ಮೂಲಕ ಕನ್ನಡ ಭಾಷೆಯನ್ನು ನಾಡಿನ ಮನೆ ಮನೆಗೂ ವಿಸ್ತರಿಸಿದ ಮಹಾನ್ ಚೇತನ. ವಿದ್ಯಾಲಂಕಾರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಶಂಬಾ ಪ್ರಶಸ್ತಿ, ಕಾಯಕ ಪ್ರಶಸ್ತಿ, ಮಶೇಡಿಯಾಪು ಪ್ರಶಸ್ತಿ, ಹಂಪಿ ವಿವಿಯ ನಾಡೋಜ ಪ್ರಶಸ್ತಿ ಮುಂತಾದ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ವೆಂಕಟಸುಬ್ಬಯ್ಯ ಅವರು, ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅಲ್ಲದೇ ಅಂತಾರಾಷ್ಟ್ರೀಯ ನಿಘಂಟು ಸಮ್ಮೇಳನಗಳಲ್ಲಿ ಭಾಗವಹಿಸಿದ ಹಿರಿಮೆ ವೆಂಟಕಸುಬ್ಬಯ್ಯ ಅವರದ್ದಾಗಿದೆ.
ಕನ್ನಡದ ಅತಿ ದೊಡ್ಡ ವಿದ್ವಾಂಸರಾದ ವೆಂಕಟಸುಬ್ಬಯ್ಯನವರು ಇಹಲೋಕ ತ್ಯಜಿಸಿರುವುದು ಕನ್ನಡ ಸಾಹಿತ್ಯ ಮತ್ತು ನಿಘಂಟು ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿರುವ ನಾಗಾಭರಣ ಅವರು, ಅವರ ಅಭಿಮಾನಿಗಳು, ಕುಟುಂಬ ವರ್ಗಕ್ಕೆ ಕನ್ನಡಾಂಬೆ, ತಾಯಿ ಭುವನೇಶ್ವರಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.