ಬೆಂಗಳೂರು:ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೇತೃತ್ವದಲ್ಲಿ ಶನಿವಾರ ಪ್ರವಾಹ ಸಂತ್ರಸ್ತರಿಗೆ ತುರ್ತು ಅಗತ್ಯ ಹಾಗೂ ಬಳಕೆಗೆ ಅನುಕೂಲವಾಗುವ ಸಾಮಗ್ರಿಗಳ ರವಾನೆ ಮಾಡಲಾಯಿತು.
ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ತಂಗಿರುವ ನಾಗರಿಕರಿಗೆ ಈ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವನ್ನು ಇನ್ಫೋಸಿಸ್ ಫೌಂಡೇಶನ್ ನೇರವಾಗಿ ಮಾಡುತ್ತಿದೆ. ಶನಿವಾರ ಬೆಳಗ್ಗೆ ಹುಬ್ಬಳ್ಳಿ ಹಾಗೂ ಬಾಗಲಕೋಟೆಗೆ ಅಗತ್ಯ ವಸ್ತುಗಳನ್ನು ಹೊತ್ತು ತೆರಳಿದ ವಾಹನಗಳು ಸಂಜೆ ಧಾರವಾಡಕ್ಕೆ ತಲುಪಿವೆ.
ಇನ್ಫೋಸಿಸ್ ಫೌಂಡೇಶನ್ನಿಂದ ಅಗತ್ಯ ಪರಿಹಾರ ಸಾಮಗ್ರಿ ರವಾನೆ ಫೌಂಡೇಶನ್ನ ಸದಸ್ಯರಿಂದಲೂ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಖುದ್ದು ಸುಧಾಮೂರ್ತಿ ಅವರೇ ಈ ಸಂಗ್ರಹ ಕಾರ್ಯದ ಮೇಲ್ವಿಚಾರಣೆ ಹಾಗೂ ವಾಹನಕ್ಕೆ ತುಂಬಿಸುವ ಸಂದರ್ಭ ಸ್ಥಳದಲ್ಲಿದ್ದು ಪರಿಶೀಲಿಸಿದರು. ಎರಡು ದಿನಗಳಿಂದ ನಿರಂತರವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಈಗಾಗಲೇ ಅವರು ನೆರೆ ಸಂತ್ರಸ್ತರ ನೆರವಿಗೆ ₹ 10 ಕೋಟಿ ನೀಡಿದ್ದಾರೆ.
ಕಳೆದ ವರ್ಷ ಭಾರಿ ಮಳೆಯಿಂದಾಗಿ ಮಡಿಕೇರಿ ಹಾಗೂ ಕೇರಳದಲ್ಲಿ ಉಂಟಾದ ಪ್ರವಾಹ ಸಂದರ್ಭ ಮನೆ ಕಳೆದುಕೊಂಡವರಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಸುಧಾಮೂರ್ತಿ ಅವರು ಸಹಾಯಹಸ್ತ ಚಾಚಿ ಸೂರು ಕಲ್ಪಿಸಿದ್ದರು. ಈ ಬಾರಿಯೂ ಅದೇ ರೀತಿ ಒಳ್ಳೆಯ ಕಾರ್ಯವನ್ನು ಮುಂದುವರಿಸಿದ್ದಾರೆ.