ಬೆಂಗಳೂರು : ಕೂಡ್ಗಿ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ ಹಂಚಿಕೆಯಾದ ವಿದ್ಯುತ್ ಅನ್ನು ಪಂಜಾಬ್ ರಾಜ್ಯಕ್ಕೆ ವರ್ಗಾಯಿಸುವ ಮೂಲಕ ಸುಮಾರು 500 ಕೋಟಿ ರೂ. ನಿಗದಿತ ಶುಲ್ಕ ಉಳಿತಾಯ ಮಾಡುವಲ್ಲಿ ಇಂಧನ ಇಲಾಖೆ ಯಶಸ್ವಿಯಾಗಿದೆ.
ಕೂಡ್ಗಿ ವಿದ್ಯುತ್ ಸ್ಥಾವರದಿಂದ ರಾಜ್ಯಕ್ಕೆ ಹಂಚಿಕೆಯಾದ ವಿದ್ಯುತ್ ಬಳಕೆ ಮಳೆಗಾಲದಲ್ಲಿ ಅಗತ್ಯವಿಲ್ಲ ಎಂದು ಮೊದಲೇ ಗ್ರಹಿಸಿದ್ದ ಇಂಧನ ಇಲಾಖೆ ರಾಜ್ಯದ ಪಾಲನ್ನು ಅನ್ಯ ರಾಜ್ಯಗಳಿಗೆ ವಿನಿಮಯ ಮಾಡಲು ಅವಕಾಶ ಕೊಡಿ ಎಂದು ಈ ಮೊದಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರಿಂದ ಸುಮಾರು 20 ದಿನಗಳವರೆಗೆ ಕೂಡ್ಗಿ ವಿದ್ಯುತ್ ವರ್ಗಾವಣೆ ಕಾರ್ಯವನ್ನು ರಾಷ್ಟ್ರೀಯ ಸಂಪನ್ಮೂಲ ವಿನಿಮಯ ಒಪ್ಪಂದ ನೀತಿ ಅನ್ವಯ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ವಿ.ಸುನೀಲ್ ಕುಮಾರ್ ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ವಿದ್ಯುತ್ ಉತ್ಪಾದನೆ ಹಾಗೂ ಸರಬರಾಜು ಪ್ರಕ್ರಿಯೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದರ ಜತೆಗೆ ವೆಚ್ಚ ಕಡಿತಕ್ಕೂ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮುಂಚಿತವಾಗಿಯೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಂಚಿಕೆಯಾದ ವಿದ್ಯುತ್ ವಿನಿಮಯಕ್ಕೆ ಅನುಮತಿ ಕೋರಿದ್ದರು.
ಇದರಿಂದಾಗಿ ನಿಗದಿತ ಶುಲ್ಕದಲ್ಲಿ ₹500 ಕೋಟಿಗೂ ಹೆಚ್ಚು ಉಳಿತಾಯ ಮಾಡಿದಂತಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಥ ವಿಚಾರಗಳಿಗೆ ಆದ್ಯತೆ ನೀಡದೇ ಇದ್ದುದರಿಂದ ನಿಗದಿತ ಉತ್ಪಾದನಾ ಶುಲ್ಕದ ಹೊರೆಯನ್ನು ಅನಗತ್ಯವಾಗಿ ರಾಜ್ಯ ಭರಿಸಬೇಕಾಗಿತ್ತು. ಇಲಾಖೆಯ ಈ ಕ್ರಮವನ್ನು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.