ಬೆಂಗಳೂರು: ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿಯೂ ಕಾರಣರಾಗಿದ್ದ ಮಾಜಿ ಸಚಿವ ಎಸ್ ಆರ್ ಪಾಟೀಲ್ ಈಗ ಏಕಾಂಗಿಯಾಗಿ ಹೊಸದೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಉತ್ತರಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಟ್ರ್ಯಾಕ್ಟರ್ ರ‍್ಯಾಲಿಗೆ ಮುಂದಾಗಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸದಾ ತಮ್ಮ ಕಾಳಜಿ ವ್ಯಕ್ತಪಡಿಸುತ್ತಿದ್ದ ಎಸ್ಆರ್ಪಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ನೀರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಹ ಪ್ರಮುಖ ಪಾತ್ರವಹಿಸಿತ್ತು. ಇದನ್ನು ಆಯೋಜಿಸುವಲ್ಲಿ ಎಸ್ ಆರ್ ಪಾಟೀಲರು ಪ್ರಮುಖ ಸ್ಥಾನ ನಿರ್ವಹಿಸಿದ್ದರು.
ನೀರಾವರಿ ಯೋಜನೆ ಜಾರಿಗಾಗಿ ಹೋರಾಟ :ಬಾಗಲಕೋಟೆ, ವಿಜಯಪುರ ಸೇರಿದಂತೆ ಐದು ಜಿಲ್ಲೆಗೆ ನೀರಾವರಿ ಸೌಕರ್ಯ ಕಲ್ಪಿಸುವ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಿರತವಾಗಿ ಶ್ರಮಿಸುತ್ತಿರುವ ಎಸ್ಆರ್ ಪಾಟೀಲ್ ಇದೀಗ ವಿಧಾನ ಪರಿಷತ್ ಸದಸ್ಯತ್ವವನ್ನೂ ಕಳೆದುಕೊಂಡು, ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದಲೂ ದೂರವುಳಿದು ಏಕಾಂಗಿಯಾಗಿದ್ದಾರೆ.
ಆದರೂ ಛಲ ಬಿಡದೇ ನೀರಾವರಿ ಯೋಜನೆ ಜಾರಿಗಾಗಿ ಹೋರಾಟ ಮುಂದುವರಿಸಲು ನಿಶ್ಚಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಚಟುವಟಿಕೆ, ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ಬಿಜೆಪಿ ಸೇರುತ್ತಾರೆ ಎನ್ನುವ ಅನುಮಾನವನ್ನು ಮೂಡಿಸಿದ್ದ ಎಸ್ಆರ್ಪಿ ಇದೀಗ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಸರ್ಕಾರದ ವಿರುದ್ಧದ ಹೋರಾಟಕ್ಕೆ ಯೋಚನೆ ಮಾಡಿದ್ದಾರೆ.
ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹ :ಉತ್ತರಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ವಿನೂತನ ರ‍್ಯಾಲಿಗೆ ಮುಂದಾಗಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಏಪ್ರಿಲ್ 13ರಿಂದ 17ರವರೆಗೆ ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಪಾಟೀಲರಿಗೆ ಇದೀಗ ಸಚಿವ ಮುರುಗೇಶ್ ನಿರಾಣಿ ಪ್ರತಿನಿಧಿಸುತ್ತಿರುವ ಬೀಳಗಿ ಕ್ಷೇತ್ರದಿಂದ ಟಿಕೆಟ್ ಭರವಸೆ ನೀಡಲಾಗಿದೆ. ಸದ್ಯ ಅವರು ನವಲಗುಂದದಿಂದ ಬೀಳಗಿವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.