ಬೆಂಗಳೂರು: ಕೃಷಿ ಕ್ಷೇತ್ರಕ್ಕೆ(agriculture sector) ಆಧುನಿಕ ತಂತ್ರಜ್ಞಾನಗಳ ಪ್ರವೇಶ ಆಗುತ್ತಿದ್ದು, ಕೃಷಿಕರಿಗೆ ಸಾಕಷ್ಟು ವಿಧದಲ್ಲಿ ಹಣ ಉಳಿತಾಯ ಮಾಡಿಕೊಡುವ ಕಾರ್ಯ ಯಶಸ್ಸು ಕಾಣುತ್ತಿದೆ.
ಬೆಂಗಳೂರಿನ ಜಕ್ಕೂರು ಸಮೀಪದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಕೃಷಿ ಮೇಳ ( Bangalore Agricultural Fair)ದಲ್ಲಿ ಹತ್ತು ಹಲವು ಆಕರ್ಷಣೆಗಳು ರೈತರು, ಕೃಷಿ ಕ್ಷೇತ್ರದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ಸೆಳೆಯುತ್ತಿದೆ.
ಟ್ರ್ಯಾಕ್ಟರ್ ಕಂ ಜೆಸಿಬಿ:
ಟ್ರ್ಯಾಕ್ಟರ್ ಕಂ ಜೆಸಿಬಿ (tractor come jcb) ಪ್ರಮುಖ ಆಕರ್ಷಣೆಯಲ್ಲಿ ಒಂದು. ತಮಿಳುನಾಡು ಮೂಲದ ಖಾಸಗಿ ಸಂಸ್ಥೆಯೊಂದು ಆವಿಷ್ಕರಿಸಿರುವ ಈ ಟ್ರ್ಯಾಕ್ಟರ್ ಕಂ ಜೆಸಿಬಿ ರೈತರಿಗೆ ಬಹುಪಯೋಗಿಯಾಗಿದೆ. ವರ್ಷದ ಎಲ್ಲ ಸಮಯದಲ್ಲಿಯೂ ಟ್ರ್ಯಾಕ್ಟರ್ಗೆ (tractor) ಕೆಲಸ ಇರುವುದಿಲ್ಲ. ಆ ಸಂದರ್ಭದಲ್ಲಿ ಇದಕ್ಕೆ ಜೆಸಿಬಿಯ ಸಲಕರಣೆ ಅಳವಡಿಸಿ ತೋಟ, ಗದ್ದೆ ಸೇರಿ ಇತರ ಕೆಲಸ ಮಾಡಿಕೊಳ್ಳುವ ಬಹುಪಯೋಗಿ ವಿಧಾನವನ್ನು ಈ ಮೂಲಕ ಪರಿಚಯಿಸಲಾಗಿದೆ.
ಕೃಷಿ ಭೂಮಿಯಲ್ಲಿ ಅಗೆಯುವುದು, ಕೊಚ್ಚುವುದು, ಗುಂಡಿ ತೋಡುವುದು, ಕಾಲುವೆ ನಿರ್ಮಿಸುವುದು ಇತ್ಯಾದಿ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಇದಕ್ಕಾಗಿ ಪ್ರತ್ಯೇಕ ಜೆಸಿಬಿ ತರಿಸಿ ಕೆಲಸ ಮಾಡುವುದರಿಂದ ವೆಚ್ಚ ಹೆಚ್ಚಾಗಬಹುದು. ಅದನ್ನು ಮನಗಂಡು ಈ ಟ್ರ್ಯಾಕ್ಟರ್ ಕಂ ಜೆಸಿಬಿ ಆವಿಷ್ಕರಿಸಲಾಗಿದೆ.
ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವಾಗ ಬಳಕೆ ಮಾಡಿ, ನಂತರ ಅದರ ಅಗತ್ಯ ಇಲ್ಲದ ಸಂದರ್ಭದಲ್ಲಿ ಜೆಸಿಬಿ ರೀತಿಯಲ್ಲೂ ಬಳಸಿಕೊಳ್ಳಬಹುದು. ತಮ್ಮ ಭೂಮಿಯ ಕೆಲಸ ಮಾತ್ರವಲ್ಲ, ಅಕ್ಕಪಕ್ಕದವರ ಅನುಕೂಲಕ್ಕೂ ಬಳಸಬಹುದು. ಇದರಿಂದ ಒಂದಿಷ್ಟು ಆದಾಯ ಸಂಪಾದಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಸಾಧನಗಳಿಗೆ ಕೃಷಿಕರಿಂದ ಬೇಡಿಕೆ ಹೆಚ್ಚುತ್ತಿದೆ ಎಂದು ಉತ್ಪಾದಕರು ಹೇಳುತ್ತಾರೆ.
ಇರುವ ಟ್ರ್ಯಾಕ್ಟರ್ಗೆ ಜೆಸಿಬಿ ಯಂತ್ರ ಅಳವಡಿಕೆ:
ತಮಿಳುನಾಡು ಕೊಯಮತ್ತೂರು ಮೂಲದ ಬುಲ್ ಮಶಿನ್ ಕಂಪನಿ (bul Machine company)ಯ ಕರ್ನಾಟಕ ಪ್ರದೇಶ ವ್ಯವಸ್ಥಾಪಕ ರಾಜಶೇಖರ್ ಪ್ರಕಾರ, ಮೊದಲು ದೊಡ್ಡ ಟ್ರ್ಯಾಕ್ಟರ್ಗಳಿಗೆ ಈ ರೀತಿಯ ಸಾಧನ ಅಳವಡಿಸುತ್ತಿದ್ದೆವು. ಈಗೀಗ ಚಿಕ್ಕ ಟ್ರ್ಯಾಕ್ಟರ್ಗಳಿಗೆ ಅಳವಡಿಸುತ್ತಿದ್ದೇವೆ. ಇದರಿಂದ ರೈತರಿಗೆ ಹೆಚ್ಚು ಉಪಯೋಗವಾಗುತ್ತದೆ. ಇದನ್ನು ಬ್ಯಾಕೋಲೋಡರ್ ಎಂದು ಕರೆಯುತ್ತೇವೆ.
ಕೃಷಿ ಚಟುವಟಿಕೆಗೆ, ಉಳುಮೆಗೆ, ಕಾಲುವೆ ತೆಗೆಯಲು, ಸಗಣಿ, ಗೊಬ್ಬರ ತುಂಬುವುದಕ್ಕೆ, ರೈತರು ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದಾರೆ. ಆಸ್ರೆ ಚಿಕ್ಕಪುಟ್ಟ ಕೆಲಸವನ್ನು ರೈತರೇ ಮಾಡಬಹುದು. ಒಂದೆರಡು ಗಂಟೆಯ ಕೆಲಸಕ್ಕಾಗಿ ಜೆಸಿಬಿಯವರು ಬರಲ್ಲ. ಇರುವ ಟ್ರ್ಯಾಕ್ಟರ್ಗೆ ಹಿಂದಿನ ಹಾಗೂ ಮುಂದಿನ ಸಾಧನ ಸೇರಿ 4 ಲಕ್ಷ ರೂ. ವೆಚ್ಚ ಆಗುತ್ತದೆ. ಇದಕ್ಕೆ ಸಬ್ಸಿಡಿ ಸಿಗಲ್ಲ, ಸರ್ಕಾರದಿಂದ ಪರವಾನಗಿ ಸಿಗದ ಹಿನ್ನೆಲೆ ನಾವೇ ಬೆಲೆ ಕಡಿಮೆ ಇಟ್ಟಿದ್ದೇವೆ. ಕಂಪನಿಗೆ 23 ವರ್ಷವಾಗಿದ್ದು, ಈ ಮಾದರಿಯ ಅಳವಡಿಕೆ ಆರಂಭಿಸಿ 4 ವರ್ಷವಾಗಿದೆ. ಶೇ.80 ರಷ್ಟು ಗ್ರಾಹಕರು ಸಂತೃಪ್ತರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಮದುವೆಯಾಗುವುದಾಗಿ ಮಹಿಳೆಗೆ ವಂಚನೆ: ಚಿನ್ನ, ನಗದು ಹೊತ್ತೊಯ್ದ ಕತರ್ನಾಕ್ ಖದೀಮ
ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಹೊಸ ತಂತ್ರಜ್ಞಾನಗಳ ಪ್ರವೇಶ ಆಗುತ್ತಿದ್ದು, ಸಣ್ಣ ಪ್ರಮಾಣದ ಭೂಮಿ ಹೊಂದಿರುವ ರೈತರಿಗೆ ಬಹಳ ಅನುಕೂಲ ಆಗಲಿದೆ.