ಕರ್ನಾಟಕ

karnataka

ETV Bharat / city

ಡಿಸಿಎಂ ಸಂಧಾನ: ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಬಿಕ್ಕಟ್ಟು ಸುಖಾಂತ್ಯ - ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ

ಸುದೀರ್ಘವಾಗಿ ಮುಂದುವರಿದಿದ್ದ ಟೊಯೋಟಾ ಕಿರ್ಲೋಸ್ಕರ್‌ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಬಗೆ ಹರಿದಿದ್ದು, ನನಗೆ ಸಂತೋಷ ತಂದಿದೆ ಎಂದು ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥ ನಾರಾಯಣ ಹೇಳಿದ್ದಾರೆ.

Toyota Kirloskar workers crisis happy end
ಟೊಯೋಟ ಕಿರ್ಲೋಸ್ಕರ್‌ ಕಾರ್ಮಿಕರ ಬಿಕ್ಕಟ್ಟು ಸುಖಾಂತ್ಯ

By

Published : Mar 4, 2021, 6:38 AM IST

ಬೆಂಗಳೂರು: ಕಳೆದ 115 ದಿನಗಳಿಂದ ಕಗ್ಗಂಟಾಗಿದ್ದ ಬಿಡದಿಯ ಟೊಯೋಟಾ ಕಿರ್ಲೋಸ್ಕರ್‌ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ ಕೊನೆಗೂ ಸಫಲರಾಗಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಟೊಯೋಟಾ ಕಿರ್ಲೋಸ್ಕರ್‌ ಕಂಪನಿಯ ಹಿರಿಯ ಉಪಾಧ್ಯಕ್ಷ ಸುದೀಪ್‌ ದಾಲ್ವೆ, ಉಪಾಧ್ಯಕ್ಷ ಶಂಕರ್‌, ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಬಾರ್‌, ಮಾಗಡಿ ಶಾಸಕ ಮಂಜುನಾಥ ಜತೆ ಮಹತ್ವದ ಮಾತುಕತೆ ನಡೆಸಿದ ಡಿಸಿಎಂ, ಈ ತಿಂಗಳ 5ನೇ ತಾರೀಖಿನೊಳಗೆ ಎಲ್ಲ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಹಾಗೂ ಇಂತಹ ಸಮಸ್ಯೆಗಳು ಭವಿಷ್ಯದಲ್ಲಿ ಮರುಕಳಿಸಬಾರದು ಎಂದು ಆಡಳಿತ ಮಂಡಳಿ ಅಧಿಕಾರಿಗಳು, ಕಾರ್ಮಿಕರಿಗೆ ಕಿವಿಮಾತು ಹೇಳಿದರು.‌

ಡಿಸಿಎಂ ಸಂಧಾನ: ಟೊಯೋಟಾ ಕಿರ್ಲೋಸ್ಕರ್‌ ಕಾರ್ಮಿಕರ ಬಿಕ್ಕಟ್ಟು ಸುಖಾಂತ್ಯ

ಬಿಕ್ಕಟ್ಟು ಸಂಪೂರ್ಣವಾಗಿ ಸುಖಾಂತ್ಯವಾಗಿದೆ. 2,800 ಕಾರ್ಮಿಕರು ಇದೀಗ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಈ ತಿಂಗಳ 5ನೇ ದಿನಾಂಕದವರೆಗೂ ಸಮಯ ಇದೆ. ಅಷ್ಟರೊಳಗೆ ಉಳಿದ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. 2,800 ಕಾರ್ಮಿಕರು ಈಗಾಗಲೇ ಆಡಳಿತ ಮಂಡಳಿಗೆ ಮುಚ್ಚಳಿಕೆ ಬರೆದುಕೊಟ್ಟು ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದರಲ್ಲಿ 1,000 ಕಾರ್ಮಿಕರಿಗೆ ಯೂನಿಯನ್‌ ಕಡೆಯಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಈ ಆಧಾರದ ಮೇಲೆಯೇ ಇವರೆಲ್ಲರೂ ಈಗ ಕೆಲಸಕ್ಕೆ ಬರುತ್ತಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.

ರಾಜ್ಯದ ಹೆಗ್ಗಳಿಕೆಗೆ ಧಕ್ಕೆ ಬೇಡ:

ಸುದೀರ್ಘವಾಗಿ ಮುಂದುವರಿದಿದ್ದ ಬಿಕ್ಕಟ್ಟು ಬಗೆಹರಿದ್ದು, ನನಗೆ ಸಂತೋಷವನ್ನುಂಟು ಮಾಡಿದೆ. ಕಾನೂನು ಪ್ರಕಾರ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ ಹಾಗೂ ಕಾರ್ಮಿಕರು ಕೂಡ ಯಾವುದೇ ಸಮಸ್ಯೆಗೆ ಅವಕಾಶ ನೀಡದಂತೆ ಉತ್ತಮವಾಗಿ ಕೆಲಸ ಮಾಡಬೇಕು. ಆ ಮೂಲಕ ಕರ್ನಾಟಕವು ಕೈಗಾರಿಕಾ ಸ್ನೇಹಿ ರಾಜ್ಯ ಎಂಬ ಹೆಗ್ಗಳಿಕೆಯನ್ನು ಎತ್ತಿ ಹಿಡಿಯಬೇಕು.

ಕಾರ್ಮಿಕರ ಜತೆ ಸೌಹಾರ್ದ ಸಂಬಂಧ ಇಟ್ಟುಕೊಳ್ಳಿ. ಹಳೆಯದನ್ನು ಕೆದಕುವುದು ಬೇಡ. ರಾಜ್ಯದಲ್ಲಿ ಕೈಗಾರಿಕೆ ಬೆಳವಣಿಗೆಯೂ ಮುಖ್ಯ. ಅದೇ ರೀತಿ ಕಾರ್ಮಿಕರ ಹಿತರಕ್ಷಣೆಯೂ ಸರ್ಕಾರಕ್ಕೆ ಆದ್ಯತೆಯ ವಿಷಯ. ಹೀಗಾಗಿ, ಯಾವುದೇ ಕಾರಣಕ್ಕೂ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಬೇಡ. ಕಂಪನಿಯೂ ಚೆನ್ನಾಗಿರಬೇಕು ಮತ್ತು ಕಾರ್ಮಿಕರು ಚೆನ್ನಾಗಿರಬೇಕು ಎಂಬುದು ಸರ್ಕಾರದ ನೀತಿ.

ಬಿಕ್ಕಟ್ಟು ಶಮನಕ್ಕೆ ಕಾರ್ಮಿಕ ಸಚಿವರಾದ ಶಿವರಾಮ್‌ ಹೆಬ್ಬಾರ್, ಮಾಗಡಿ ಶಾಸಕರಾದ ಮಂಜುನಾಥ್‌ ಸಾಕಷ್ಟು ಶ್ರಮಿಸಿದ್ದಾರೆ. ರಾಜ್ಯವು ಆಟೋಮೊಬೈಲ್‌ ಕ್ಷೇತ್ರದಲ್ಲಿ ಶರವೇಗದಲ್ಲಿ ಬೆಳೆಯುತ್ತಿದೆ. ಈ ಕ್ಷೇತ್ರದಲ್ಲಿ ಹೊಸ - ಹೊಸ ಹೂಡಿಕೆಗಳು ಬರುತ್ತಿವೆ. ಇಂತಹ ಹೊತ್ತಿನಲ್ಲಿ ಈ ಪರಿಸ್ಥಿತಿ ಅನಗತ್ಯವಾಗಿತ್ತು. ಈಗ ಎಲ್ಲವೂ ಮುಗಿದ ಅಧ್ಯಾಯವಾಗಿದ್ದು, ರಾಜ್ಯಕ್ಕೆ ಕಪ್ಪುಚುಕ್ಕೆ ತರುವ ಕೆಲಸವನ್ನು ಯಾರೂ ಮಾಡುವುದು ಬೇಡ. ಕೋವಿಡ್‌ ಕಾರಣಕ್ಕೆ ಕರ್ನಾಟಕದ ಎಲ್ಲ ಕ್ಷೇತ್ರಗಳು ಕಷ್ಟಕ್ಕೆ ಸಿಲುಕಿದ್ದವು. ಆದರೂ ರಾಜ್ಯದ ಆರ್ಥಿಕತೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸರ್ಕಾರ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಉದ್ಯೋಗ ನಷ್ಟ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿತ್ತು. ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಶ್ವತ್ಥನಾರಾಯಣ ಕಾರ್ಮಿಕರನ್ನು ಕೋರಿದರು.

ವಿಸ್ತರಣಾ ಯೋಜನೆ ನಿಲ್ಲುವುದು ಬೇಡ:

ಟೊಯೋಟಾ-ಕಿರ್ಲೋಸ್ಕರ್‌ ಕಂಪನಿ ಕೈಗೊಂಡಿರುವ ವಿಸ್ತರಣಾ ಯೋಜನೆ ನಿಲ್ಲುವುದು ಬೇಡ. ಎಲೆಕ್ಟ್ರಿಕ್‌ ಕಾರು ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕಂಪನಿ ಹಾಕಿಕೊಂಡಿದೆ. ಇದರಿಂದ 25 ಸಾವಿರ ಕುಟುಂಬಗಳಿಗೆ ಪ್ರತ್ಯಕ್ಷ - ಪರೋಕ್ಷವಾಗಿ ಉದ್ಯೋಗ ಕಲ್ಪಿಸುವ ಈ ವಿಸ್ತರಣಾ ಕಾರ್ಯಕ್ರಮ ನಿಲ್ಲುವುದು ಬೇಡ ಡಿಸಿಎಂ ಹೇಳಿದರು. ಈ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಅಧಿಕಾರಿಗಳು ಬಿಕ್ಕಟ್ಟು ಶಮನಕ್ಕೆ ಕಾರಣರಾದ ಉಪ ಮುಖ್ಯಮಂತ್ರಿಗಳನ್ನು ಅಭಿನಂದಿಸಿದರು.

ಏನಿದು ಬಿಕ್ಕಟ್ಟು?

ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾದ ತಿಕ್ಕಾಟದಿಂದ ಸುಮಾರು 39 ಕಾರ್ಮಿಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕಾರ್ಮಿಕರು 2020ರ ನವೆಂಬರ್‌ 10ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದರೆ, ಕಂಪನಿಯೂ ಲಾಕ್‌ಔಟ್‌ ಘೋಷಣೆ ಮಾಡಿತ್ತು.

ನಂತರ ರಾಜಿ ಸಂಧಾನ ಹಾಗೂ ಸರ್ಕಾರದ ಪ್ರಯತ್ನದಿಂದಾಗಿ ನವೆಂಬರ್ 19ರಿಂದ ಜಾರಿಗೆ ಬರುವಂತೆ ಲಾಕ್‌ಔಟ್‌ ವಾಪಸ್‌ ಪಡೆದುಕೊಂಡಿತ್ತು.‌ ಅದಾದ ಮೇಲೂ ಅನೇಕ ನೌಕರರು ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಕಂಪನಿ ಮತ್ತೊಮ್ಮೆ ಲಾಕ್‌ಔಟ್‌‌ ಘೋಷಣೆ ಮಾಡಿತ್ತು. ಆ ಬಳಿಕ ನವೆಂಬರ್‌ 23ರಿಂದ ಕೆಲಸಕ್ಕೆ ಹಾಜರಾಗಲು ಕಾರ್ಮಿಕರಿಗೆ ಆಡಳಿತ ಮಂಡಳಿ ಅವಕಾಶ ನೀಡಿತ್ತು.

ಇದೀಗ ಉಪ ಮುಖ್ಯಮಂತ್ರಿ ಡಾ. ಸಿ.ಎನ್.‌ಅಶ್ವತ್ಥನಾರಾಯಣ ಟೊಯೋಟಾ ಕಿರ್ಲೋಸ್ಕರ್‌ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಸಫಲರಾಗಿದ್ದಾರೆ.

ABOUT THE AUTHOR

...view details