ಬೆಂಗಳೂರು: ಒಕ್ಕಲಿಗ ಜನಾಂಗದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನವನ್ನು ಖಂಡಿಸಿ ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ನಾಳೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
10 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡು ಅಲ್ಲಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಒಕ್ಕೂಟದ ಪ್ರತಿನಿಧಿಗಳು ಮನವಿ ಸಲ್ಲಿಸಲಿದ್ದಾರೆ. ಮೆರವಣಿಗೆಯಲ್ಲಿ ಕನಿಷ್ಠ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಸೇರಿಸುವ ಗುರಿ ಹೊಂದಲಾಗಿದ್ದು, ಒಕ್ಕಲಿಗ ಸಮುದಾಯದ ಎಲ್ಲ ಹಿರಿಯ ನಾಯಕರು, ವಿವಿಧ ಮಠಾಧೀಶರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ತಯಾರಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳಾದ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಗಳ ಮೂಲಕ ಡಿ ಕೆ ಶಿವಕುಮಾರ್ ಮೇಲೆ ರಾಜಕೀಯ ಸೇಡು ತೀರಿಸಿಕೊಳ್ಳುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಇದನ್ನ ಬೃಹತ್ ಪ್ರತಿಭಟನಾ ರ್ಯಾಲಿ ಮೂಲಕ ಖಂಡಿಸಲು ಒಕ್ಕಲಿಗ ಸಮುದಾಯದ ನಾಯಕರು ನಿರ್ಧರಿಸಿದ್ದಾರೆ. ಡಿಕೆಶಿ ಅವರನ್ನು ರಾಜಕೀಯದ ಸೇಡಿಗಾಗಿ ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಒಕ್ಕಲಿಗ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಈ ಪ್ರತಿಭಟನಾ ರ್ಯಾಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.
ಸಂಚಾರ ದಟ್ಟಣೆ ಸಾಧ್ಯತೆ:
ನಾಳೆಯ ಪ್ರತಿಭಟನಾ ಮೆರವಣಿಗೆ ಸಂದರ್ಭ ನಗರದ ಆರ್ವಿ ರಸ್ತೆ, ಮಿನರ್ವ ವೃತ್ತ, ಕೆಜಿ ರಸ್ತೆ ಮತ್ತು ಸುತ್ತಲಿನ ಭಾಗಗಳ ರಸ್ತೆಯಲ್ಲಿ ಸಂಚಾರ ದಟ್ಟಣೆ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಸಾವಿರಾರು ಮಂದಿ ಮೆರವಣಿಗೆಗೆ ತೆರಳುವ ಹಿನ್ನೆಲೆ ಈ ಮಾರ್ಗಗಳಲ್ಲಿ ದಟ್ಟಣೆ ಉಂಟಾಗಲಿದ್ದು ಸಂಚಾರ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ನಿತ್ಯದ ಸಂಚಾರ ವ್ಯವಸ್ಥೆ ನಾಳೆ ಇರುವುದಿಲ್ಲ. ಇದರಿಂದ ಈ ಮಾರ್ಗದಲ್ಲಿ ತೆರಳುವವರು ಪರ್ಯಾಯ ಮಾರ್ಗ ಅನುಸರಿಸುವುದು ಒಳಿತು.