ಕರ್ನಾಟಕ

karnataka

By

Published : Nov 4, 2019, 10:42 PM IST

Updated : Nov 4, 2019, 11:39 PM IST

ETV Bharat / city

ಡಿಸಿಎಂ ಮಾತಿಗೂ ಜಗ್ಗದ ಕಿರಿಯ ವೈದ್ಯರು: ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಸಜ್ಜು

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕಿರಿಯ ವೈದ್ಯರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ.

tomorrow also junior doctors protest

ಬೆಂಗಳೂರು:ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಕಿರಿಯ ವೈದ್ಯರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಉಪಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಅಶ್ವತ್ಥ್​​ ನಾರಾಯಣ ಅವರು ನೀಡಿದ ಭರವಸೆಗೂ ಜಗ್ಗದೇ ನಾಳೆಯಿಂದ ರಾಜ್ಯ ವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ, ವಾಣಿ ವಿಲಾಸ, ಮಿಂಟೋ, ಬೌರಿಂಗ್ ಆಸ್ಪತ್ರೆಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಸೇವೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ. ಡಿಸಿಎಂ ಜೊತೆ ನಡೆದ ಒಂದೂವರೆ ತಾಸಿನ ಚರ್ಚೆಗೆ ಕ್ಯಾರೆ ಎನ್ನದ ವೈದ್ಯರು ತಮ್ಮ ಪ್ರತಿಭಟನೆಯನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ.

ಉಪಮುಖ್ಯಮಂತ್ರಿ ಅಶ್ವತ್ಥ್​​ ನಾರಾಯಣ

ಈಗಾಗಲೇ ಕನ್ನಡ ರಾಜ್ಯೋತ್ಸವ ದಿನ ಮಿಂಟೋ ಆಸ್ಪತ್ರೆ ವೈದ್ಯೆ ಮೇಲೆ ಹಲ್ಲೆ ನಡೆಸಿರುವ 30 ಕರವೇ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಕಾರ್ಯಕರ್ತರ ಬಂಧನಕ್ಕೆ ಪ್ರತಿಭಟನಾನಿರತ ವೈದ್ಯರು ಒತ್ತಾಯಿಸಿದ್ದಾರೆ. ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿರುವ ಪರಿಣಾಮ ನಾಳೆಯೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಅನುಮಾನವಾಗಿದೆ.

ಸಭೆ ಬಳಿಕ ಡಿಸಿಎಂ ಅಶ್ವತ್ಥ್​​ ನಾರಾಯಣ ಮಾತನಾಡಿ, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಆಡಳಿತ ಮಂಡಳಿಯಿಂದ ಆದ ತಪ್ಪಿಗೆ ವಿದ್ಯಾರ್ಥಿಗಳಿಗೆ ತೊಂದರೆ ಆಗಿರುವುದು ಸರಿಯಲ್ಲ. ಹೆಚ್ಚಿನ ರಕ್ಷಣೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಕರ್ನಾಟಕ ಭದ್ರತಾ ಪಡೆ ನಿಯೋಜಿಸಲಾಗುವುದು. ಇಂಥ ಘಟನೆಗಳು ಮರುಕಳಿಸದಂತೆ ಹೆಚ್ಚಿನ ಸಿ.ಸಿ. ಕ್ಯಾಮರಾ ಅಳವಡಿಸಲಾಗುವುದು ಎಂದರು.

ವ್ಯವಸ್ಥೆಯಲ್ಲಿ ಆಗುವ ತಪ್ಪುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು, ಮುಷ್ಕರ ಹಿಂಪಡೆಯುವಂತೆ ಮನವಿ ಮಾಡಲಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಲಾಗಿದೆ. ಬೆಂಗಳೂರು ಮಾತ್ರ ಅಲ್ಲ, ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಸುರಕ್ಷಿತ ವಾತಾವರಣ ಸೃಷ್ಟಿಸುತ್ತೇವೆ ಎಂದು ಸಚಿವರು ಅಭಯ ನೀಡಿದ್ರು.

ದೃಷ್ಟಿ ಕಳೆದುಕೊಂಡವರಿಗೆ ₹ 3ಲಕ್ಷ ಪರಿಹಾರ: ಅಶ್ವತ್ಥ್​ ನಾರಾಯಣ

ಜುಲೈನಲ್ಲಿ ನಡೆದ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಆದ ತಪ್ಪಿನಿಂದ ಕಣ್ಣು ಕಳೆದುಕೊಂಡಿದ್ದ 10 ಮಂದಿಗೆ ರಾಜ್ಯ ಸರ್ಕಾರ ₹ 3ಲಕ್ಷ ಪರಿಹಾರ ಘೋಷಿಸಿದೆ. ಪರಿಹಾರ ಒದಗಿಸುವುದು ತಡವಾಗಿತ್ತು. ಅವರ ನೋವು ಅರ್ಥ ಮಾಡಿಕೊಂಡು ಸರ್ಕಾರ ಪರಿಹಾರ ಘೋಷಿಸಿದೆ. ದೃಷ್ಟಿ ದೋಷ ಉಂಟಾದವರಿಗೂ ಪರಿಹಾರ ನೀಡಲಾಗುವುದು ಎಂದು ಅಶ್ವತ್ಥ್​ ನಾರಾಯಣ ಹೇಳಿದರು.

ಮುಂದಿನ ದಿನಗಳಲ್ಲಿ ತಪ್ಪಿತಸ್ಥ ಕಂಪನಿಯಿಂದ ಆ ಹಣ ವಸೂಲಿ ಮಾಡಲಾಗುವುದು. ಎಷ್ಟೇ ದುಬಾರಿಯಾದರೂ, ದೃಷ್ಟಿ ಕಳೆದುಕೊಂಡವರಿಗೆ ಅಗತ್ಯ ಚಿಕಿತ್ಸೆ ಕೊಡಿಸುವುದು ಸರ್ಕಾರದ ಜವಾಬ್ದಾರಿ. ಈ ವಿಷಯದಲ್ಲಿ ರಾಜಿ ಇಲ್ಲ. ಈ ಪ್ರಕರಣ ಸಂಬಂಧ ಜಯದೇವ ಹೃದ್ರೋಗ ಸಂಸ್ಥೆಯ ಡಾ. ರವೀಂದ್ರ ನೇತೃತ್ವದಲ್ಲಿ ರಚಿಸಿದ ಸತ್ಯ ಶೋಧನಾ ಸಮಿತಿಯಿಂದ ಮಾಹಿತಿ ಪಡೆಯಲಾಗಿದೆ. ಸಂಬಂಧಪಟ್ಟವರ ವಿಚಾರಣೆಯೂ ನಡೆದಿದೆ. ಔಷಧ ಪೂರೈಸಿದ ಸಂಸ್ಥೆಯಿಂದ ತಪ್ಪಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸಂಬಂಧಪಟ್ಟ ಇಲಾಖೆಗೆ ನೋಟಿಸ್‌ ನೀಡಲಾಗಿದೆ. ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು‌ ಎಂದು ಸಚಿವರು ಸ್ಪಷ್ಟಪಡಿಸಿದರು.

Last Updated : Nov 4, 2019, 11:39 PM IST

ABOUT THE AUTHOR

...view details