ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿಧನ ಹಿನ್ನೆಲೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಹಾಗೂ ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಅಲಿ ಸೇರಿದಂತೆ ಹಲವಾರು ತೆಲುಗು ಚಿತ್ರರಂಗದ ದಿಗ್ಗಜರು ಅಪ್ಪು ಅಂತಿಮ ದರ್ಶನ ಪಡೆದು ದೊಡ್ಡಮನೆಯ ಮಗನನ್ನು ನೆನೆದರು.
'ಅಪ್ಪು'ಜೊತೆ ಕಳೆದ ದಿನಗಳನ್ನು ನೆನದು ಬಾವುಕರಾದ ಮೆಗಾಸ್ಟಾರ್ ಚಿರಂಜೀವಿ..! ರಾಜ್ಕುಟುಂಬದ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಮೆಗಾಸ್ಟಾರ್ ಚಿರಂಜೀವಿ, ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಯಾವುದೇ ಸಮಾರಂಭ, ಶುಭಕಾರ್ಯಗಳಿದ್ದರೂ ಸ್ವತಃ ರಾಘವೇಂದ್ರ ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರು ಬಂದು ಆಮಂತ್ರಣ ನೀಡುತ್ತಿದ್ದರು. ನಮ್ಮ ಮನೆಯ ಕಾರ್ಯಕ್ರಮಗಳಿಗೂ ಕುಟುಂಬ ಸಮೇತರಾಗಿ ಬರುತ್ತಿದ್ದರು. ಇಂದು ಅಪ್ಪು ಅಕಾಲಿಕ ಮರಣ ಹೊಂದಿದ್ದು, ನಿಜಕ್ಕೂ ನನಗೆ ಅರಗಿಸಿಕೊಳ್ಳಲಾಗದ ನೋವಾಗಿದೆ. ಈ ಸಂದರ್ಭದಲ್ಲಿ ಆ ಭಗವಂತ ಅವರ ಕುಟುಂಬಕ್ಕೆ ಅಪ್ಪು ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು.
ಯಾವಾಗ್ಲೂ ನಾನು ಬೆಂಗಳೂರಿಗೆ ಬಂದಾಗ ರಾಜ್ ಕುಮಾರ್ ಮನೆಗೆ ಭೇಟಿ ಕೊಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಸಹ ಪುನೀತ್ ಭೇಟಿ ಮಾಡಿದ್ದೆ, ರಾಘವೇಂದ್ರ ರಾಜ್ಕುಮಾರ್ ಅನಾರೋಗ್ಯಕ್ಕೆ ಒಳಗಾದಾಗ ತುಂಬಾ ಸೇವೆ ಮಾಡಿದ್ದರು. ತುಂಬಾ ಒಳ್ಳೆಯ ವ್ಯಕ್ತಿ. ಇವರ ಸಾವು ನಿಜಕ್ಕೂ ಬೇಸರ ಮೂಡಿಸಿದೆ ಎಂದು ಕಂಬನಿ ಮಿಡಿದರು.
ನಟ ವಿಕ್ಟರಿ ವೆಂಕಟೇಶ್ ಮಾತನಾಡಿ, ಒಂದು ಸಹೃದಯಿ, ಕಂಚಿನ ಕಂಠದ ನಾಯಕನನ್ನು ಕಳೆದುಕೊಂಡಿದ್ದೇವೆ. ಇದು ನಿಜಕ್ಕೂ ಆಘಾತಕಾರಿ ಸುದ್ದಿ. ಇವರ ಕುಟುಂಬಕ್ಕೆ ಭರಿಸಲಾಗದ ಆಘಾತ. ಅವರ ನೋವಲ್ಲಿ ನಾನೂ ಭಾಗಿಯಾಗಿದ್ದೇನೆ. ಚಿತ್ರರಂಗ ಒಬ್ಬ ಉತ್ತಮ ನಟ, ಗಾಯಕನನ್ನು ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಟ ಶ್ರೀಕಾಂತ್ ಮಾತನಾಡಿ, ನಾನು ಅಪ್ಪು ಜೊತೆ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ಖುಷಿಯಾಗಿತ್ತು. ನನ್ನ ಜೊತೆ ಸಲುಗೆಯಿಂದ ಇರುತ್ತಿದ್ದರು. ಒಳ್ಳೆಯ ವ್ಯಕ್ತಿತ್ವ. ಅವರು ಪ್ಯಾನ್ ಇಂಡಿಯಾ ಚಿತ್ರ ಮಾಡುವ ಆಸೆ ಹೊಂದಿದ್ದರು. ಇತ್ತೀಚೆಗೆ ನಾನು ಪುನೀತ್ ಅಭಿಯನದ 'ಜೇಮ್ಸ್' ಚಿತ್ರದಲ್ಲಿ ಅವರ ಜೊತೆ ವಿಲನ್ ಪಾತ್ರದಲ್ಲಿ ನಟಿಸಿದ್ದೇನೆ. ಆ 45 ದಿನಗಳ ಪ್ರಯಾಣ ತುಂಬಾ ಖುಷಿಯಾಗಿತ್ತು. ಆದ್ರೆ ಇಂದು ಅವರ ಅಗಲಿಕೆ ನನಗೆ ಸಾಕಷ್ಟು ನೋವುಂಟು ಮಾಡಿದೆ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ. ವಿ ಮಿಸ್ ಯೂ ಅಪ್ಪು ಎಂದು ಕಣ್ಣೀರು ಹಾಕಿದರು.
ಹಾಸ್ಯ ನಟ ಅಲಿ ಮಾತನಾಡಿ, ರಾಜ್ ಕುಮಾರ್ ಕುಟುಂಬಕ್ಕೂ ಹಾಗೂ ನನಗೂ 35 ವರ್ಷಗಳ ಸಂಬಂಧವಿದೆ. ಒಳ್ಳೆಯ ಮನುಷ್ಯರನ್ನ ಭಗವಂತ ಬಹುಬೇಗನೇ ಕರೆದುಕೊಳ್ಳುತ್ತಾನೆ. ಯಾವಾಗ್ಲೂ ನನ್ನ ಭೇಟಿಯಾದಾಗ ನನಗೆ ಅಣ್ಣಾ ಎಂದು ಬಂದು ಅಪ್ಪಿಕೊಳ್ಳುತ್ತಿದ್ದರು. ಅಪ್ಪು ಕಳೆದುಕೊಂಡ ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.