ಬೆಂಗಳೂರು:ಇಂದು ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಅರಬ್ಬೀ ಸಮುದ್ರದಲ್ಲಿ ಇನ್ನೆರಡು ದಿನದಲ್ಲಿ ವಾಯುಭಾರ ಕುಸಿತ ಉಂಟಾಗುವ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.
ಈ ಬಗ್ಗೆ ಮಾತನಾಡಿದ ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್, ಚಾಮರಾಜನಗರ ಜಿಲ್ಲೆಯಲ್ಲಿ 4 ಸೆಂ.ಮೀ., ಆನೇಕಲ್ನಲ್ಲಿ 4 ಸೆಂ.ಮೀ., ಎಲೆಕ್ಟ್ರಾನಿಕ್ ಸಿಟಿಯಲ್ಲಿ 3 ಸೆಂ.ಮೀ., ಎಂಎಂ ಹಿಲ್ಸ್ನಲ್ಲಿ 3 ಸೆಂ.ಮೀ. ಮಳೆಯಾಗಿದೆ. ಈಗಿರುವ ವಾತಾವರಣದ ಕಂಡೀಷನ್ ಪ್ರಕಾರ, ಪೂರ್ವದ ಅಲೆಗಳಿಂದಾದ ವಾಯುಭಾರ ಕುಸಿತ ಮಾಲ್ಡೀವ್ಸ್ ದ್ವೀಪದಿಂದ ಆಗ್ನೇಯ ಭಾಗದ ಅರಬ್ಬೀ ಸಮುದ್ರದವರೆಗೆ ವಿಸ್ತರಿಸಿದ್ದು, ಇದು ಪಶ್ಚಿಮ ದಿಕ್ಕಿಗೆ ಚಲಿಸುವ ಸಾಧ್ಯತೆ ಇದೆ. ಆಗ್ನೇಯ ಭಾಗದ ಅರಬ್ಬೀ ಸಮುದ್ರದಲ್ಲಿ ನ. 19ರಂದು ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ನ. 17ರಿಂದ ನ. 19ರವರೆಗೆ ಹಗುರವಾಗಿ ಮಳೆಯಾಗಲಿದ್ದು, ನ. 20ರಂದು ಅಲ್ಲಲ್ಲಿ ಮಳೆಯಾಗಲಿದೆ.
ಉತ್ತರ ಒಳನಾಡಿನಲ್ಲಿ ನ. 17ರಿಂದ ನ. 20ರವರೆಗೆ ಹಗುರ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ನ. 17 ಹಾಗೂ 18ರಂದು ಮಳೆಯಾಗಲಿದೆ. ನ. 21ರ ಬಳಿಕ ರಾಜ್ಯಾದ್ಯಂತ ಒಣಹವೆ ಇರಲಿದೆ. ಬೆಂಗಳೂರು ನಗರದಲ್ಲಿ ನ. 17 ಹಾಗೂ ನ. 18ರಂದು ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದಿದ್ದಾರೆ.