ಬೆಂಗಳೂರು/ ಕೊಪ್ಪಳ: ಕೋವಿಡ್ನಿಂದಾಗಿ ಶೈಕ್ಷಣಿಕ ವರ್ಷಕ್ಕೆ ಹೆಚ್ಚು ತೊಡಕು ಉಂಟಾಗಿತ್ತು. ಇದೀಗ 2ನೇ ಅಲೆಯ ಅಟ್ಟಹಾಸ ಕಡಿಮೆಯಾಗಿದ್ದು, ಯುಜಿಸಿ ಮಾರ್ಗಸೂಚಿಯಂತೆ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಇಂದಿನಿಂದ ಆರಂಭಗೊಂಡಿದೆ.
ಇಂದಿನಿಂದ ರಾಜ್ಯದಲ್ಲಿ ಡಿಪ್ಲೊಮಾ ಸೇರಿದಂತೆ ಎಲ್ಲಾ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಕೋರ್ಸ್ಗಳಿಗೆ ಭೌತಿಕ ತರಗತಿ ಶುರುವಾಗಿದೆ. ಆದರೆ, ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲೇಬೇಕು ಎಂದು ಕಡ್ಡಾಯ ಮಾಡಿಲ್ಲ. ಆಫ್ ಲೈನ್ ಅಥವಾ ಆನ್ಲೈನ್ 2 ರಲ್ಲಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಳ್ಳಬೇಕು, ಹಾಗೂ ಹಾಜರಾತಿ ಕಡ್ಡಾಯ ಎಂದು ತಿಳಿಸಲಾಗಿದೆ.
ಲಸಿಕೆ ಪಡೆದವರಿಗಷ್ಟೇ ಕಾಲೇಜಿಗೆ ಎಂಟ್ರಿ:
ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳು, ಬೋಧಕ- ಬೋಧಕೇತರ ಸಿಬ್ಬಂದಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಭೌತಿಕ ತರಗತಿಗೆ ಹಾಜರಾಗಬೇಕು ಅಂದರೆ ಕೋವಿಡ್ ನಿಯಮ ಪಾಲನೆ ಅಷ್ಟೇ ಅಲ್ಲದೇ, ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು.
ಈಗಾಗಲೇ ಶೇ.74 ರಷ್ಟು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲಾಗಿದ್ದು, ಕೆಲ ವಿಶ್ವವಿದ್ಯಾಲಯದಲ್ಲಿ ಲಸಿಕೀಕರಣ ಮುಂದುವರೆದಿದೆ. ಒಂದು ಡೋಸ್ ಲಸಿಕೆ ಪಡೆದವರಿಗಷ್ಟೇ ಕಾಲೇಜಿಗೆ ಪ್ರವೇಶ ನೀಡಲಾಗುತ್ತಿದೆ. ಬಹುಮುಖ್ಯವಾಗಿ ಹೊರ ರಾಜ್ಯದಿಂದ ಬರುವ ವಿದ್ಯಾರ್ಥಿಗಳಿಗೆ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ.